ಕಾಶ್ಮೀರ: ಕೊರೋನ ಚಿಕಿತ್ಸೆಯ ಆಸ್ಪತ್ರೆಗಳಲ್ಲಿ ಸುರಕ್ಷಾ ಕ್ರಮಗಳ ಕೊರತೆ ; ಆರೋಪ

ಶ್ರೀನಗರ, ಎ.12: ಕಾಶ್ಮೀರದಲ್ಲಿ ಕೊರೋನ ಸೋಂಕಿನಿಂದ ಮತ್ತೆ ಇಬ್ಬರು ಮೃತಪಟ್ಟಿದ್ದು ಈ ಮಾರಣಾಂತಿಕ ಸೋಂಕು ರೋಗದಿಂದ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ. ಈ ಮಧ್ಯೆ, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆಯ ಬಗ್ಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಕುಟುಂಬದವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ಗೆ ಕುಟುಂಬದವರು ಸಲೀಸಾಗಿ ಪ್ರವೇಶಿಸಬಹುದು ಎಂದು ಕುಟುಂದವರು ಆರೋಪಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ 65 ವರ್ಷದ ವ್ಯಾಪಾರಿಯೊಬ್ಬರು ಕೊರೋನ ಸೋಂಕಿಗೆ ಒಳಗಾಗಿ ಶ್ರೀನಗರದ ಸರಕಾರಿ ಹೃದ್ರೋಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಮಾರ್ಚ್ 28ರಂದು ಮೃತಪಟ್ಟಿದ್ದರು. ಇದು ಕಾಶ್ಮೀರದಲ್ಲಿ ಕೊರೋನ ಸೋಂಕಿನಿಂದ ಸಂಭವಿಸಿದ ಎರಡನೇ ಸಾವಿನ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ವ್ಯಾಪಾರಿಯ ಕುಟುಂಬದ ಕನಿಷ್ಟ 12 ಸದಸ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ರೀತಿ ಎಪ್ರಿಲ್ 5ರಂದು ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ 52 ವರ್ಷದ ವ್ಯಾಪಾರಿಯನ್ನು ನಿಶ್ಯಕ್ತಿಯ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಪ್ರಿಲ್ 6ರಂದು ಹಾಸಿಗೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗಲೇ ಕೊನೆ ಉಸಿರೆಳೆದಿದ್ದಾರೆ. ಈ ಪ್ರಕರಣದಲ್ಲೂ ರೋಗಿಯ ಕುಟುಂಬದ 11 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
ಆದರೆ ತಮಗೆ ಆಸ್ಪತ್ರೆಯಲ್ಲೇ ಸೋಂಕು ಹರಡಿದೆ. ಆಸ್ಪತ್ರೆಯಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಕೊರೋನ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ಗೆ ಪ್ರವೇಶಿಸುವಂತೆ ತಮ್ಮನ್ನು ಆಸ್ಪತ್ರೆಯ ಸಿಬಂದಿಗಳು ಒತ್ತಾಯಿಸಿದ್ದರು. ಆದರೆ ಯಾವುದೇ ಸುರಕ್ಷಾ ಸಾಧನ ಒದಗಿಸಿರಲಿಲ್ಲ. ಕೈಗೆ ಕೈಗವಸು ಕೂಡಾ ಹಾಕಿಕೊಂಡಿರಲಿಲ್ಲ. 20 ರೂ. ಕೊಟ್ಟು ಖರೀದಿಸಿದ್ದ ಮಾಸ್ಕ್ ಮಾತ್ರ ಧರಿಸಿದ್ದೆ. ಸರಕಾರ ತಮಗೆ ಕೂಡಾ ಸೂಕ್ತ ಸುರಕ್ಷಾ ಸಾಧನಗಳನ್ನು ಒದಗಿಸಿಲ್ಲ ಎಂದು ಆಸ್ಪತ್ರೆಯ ಸಿಬಂದಿಗಳೂ ದೂರಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ವಾರ್ಡ್‌ನೊಳಗೆ ಹೋದ ಮೇಲೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಂದೆಗೆ ಆಮ್ಲಜನಕದ ಮಾಸ್ಕ್ ತೊಡಿಸುವಂತೆ ಆಸ್ಪತ್ರೆಯ ಸಿಬಂದಿ ತನಗೆ ತಿಳಿಸಿದ್ದರು. ಕೊರೋನ ಸೋಂಕು ಆಸ್ಪತ್ರೆಯಿಂದಲೇ ತಗುಲಿರುವುದರಲ್ಲಿ ಸಂದೇಹವೇ ಇಲ್ಲ ಎಂದವರು ಹೇಳಿದ್ದಾರೆ.







