ಮೂರು ಪಟ್ಟು ಹೆಚ್ಚಲಿದೆ ವಿಮಾನಯಾನ ದರ: ಕಾರಣ ಏನು ಗೊತ್ತೇ?

ಹೊಸದಿಲ್ಲಿ, ಎ.13: ದೇಶದಲ್ಲಿ ಲಾಕ್‌ಡೌನ್ ಬಳಿಕ ಮೊದಲ ಕೆಲ ದಿನಗಳಲ್ಲಿ ವಿಮಾನಯಾನ ದರ ಹಾಲಿ ಇರುವ ದರಕ್ಕಿಂತ ಮೂರು ಪಟ್ಟು ಹೆಚ್ಚಳವಾಗಲಿದೆ. ವಿಮಾನಗಳಲ್ಲಿ ಯಾನಿಗಳ ನಡುವೆ ಗರಿಷ್ಠ ಸಾಮಾಜಿಕ ಅಂತರವನ್ನು ನಿರ್ವಹಿಸುವುದನ್ನು ಖಾತರಿಪಡಿಸುವುದರಿಂದ ಪೂರ್ಣ ಸಾಮರ್ಥ್ಯದ ಮೂರನೇ ಒಂದರಷ್ಟು ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸುವುದೇ ಇದಕ್ಕೆ ಕಾರಣ.
ಮೂರು ಆಸನಗಳ ಒಂದು ಸಾಲಿನಲ್ಲಿ ಒಬ್ಬ ಪ್ರಯಾಣಿಕನನ್ನು ಮಾತ್ರ ಕರೆದೊಯ್ಯಲು ಅನುಮತಿ ನೀಡುವ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಹಿಂದಿನ ಸಾಲಿನ ಸೀಟಿನಲ್ಲಿ ಕೂರುವ ವ್ಯಕ್ತಿ ವಿರುದ್ಧ ದಿಕ್ಕಿನಲ್ಲಿ ಅಂದರೆ ಮುಂದಿನ ಸೀಟಿನ ವ್ಯಕ್ತಿ ಕಿಟಕಿ ಬದಿ ಕುಳಿತರೆ ಹಿಂದಿನ ಸೀಟಿನ ವ್ಯಕ್ತಿ ಇನ್ನೊಂದು ಬದಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಉದಾಹರಣೆಗೆ 180 ಆಸನ ವ್ಯವಸ್ಥೆಯ ವಿಮಾನದಲ್ಲಿ ಕೇವಲ 60 ಮಂದಿಯಷ್ಟೇ ಪ್ರಯಾಣಿಸಲು ಅವಕಾಶ ಇರುತ್ತದೆ. ಇದರಿಂದ ಆಗುವ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ವಿಮಾನಯಾನ ದರವನ್ನು 1.5ರಿಂದ 3 ಪಟ್ಟು ಹೆಚ್ಚಿಸಲು ಅವಕಾಶ ನೀಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಸನದ ಅಗಲದ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಒಂದು ಸೀಟಿನ ಅಂತರ ಸೂಕ್ತ ಸಾಮಾಜಿಕ ಅಂತರ ನಿಯಮಕ್ಕೆ ಸಾಕಾಗುವುದಿಲ್ಲ. ಕ್ರಮೇಣ ಕೊರೋನ ಹರಡುವಿಕೆ ಕಡಿಮೆಯಾದ ಬಳಿಕ ಹಾಗೂ ಔಷಧಿ/ ಲಸಿಕೆ ಅಭಿವೃದ್ಧಿಪಡಿಸಿದ ಬಳಿಕ ಸಾಮಾಜಿಕ ಅಂತರ ನಿಯಮಾವಳಿ ಸಡಿಲಿಸಲಾಗುವುದು ಎಂದು ವಿವರಿಸಿದ್ದಾರೆ.
ವಿಮಾನಯಾನ ಪುನರಾರಂಭದ ಕಾರ್ಯಯೋಜನೆಯನ್ನು ವಿಮಾನಯಾನಗಳ ಮಹಾನಿರ್ದೇಶಕರು ಸಿದ್ಧಪಡಿಸುತ್ತಿದ್ದು, ಲಾಕ್‌ಡೌನ್ ಬಳಿಕದ ಅವಧಿಯಲ್ಲಿ ಪ್ರಯಾಣಿಕರ ಚಲನೆಗೆ ಅನುಮತಿ ನೀಡಿದ ಬಳಿಕ ಇದು ಜಾರಿಗೆ ಬರಲಿದೆ. ವಿಮಾನ ನಿಲ್ದಾಣಗಳಲ್ಲಿ ಕೂಡಾ ಪ್ರಯಾಣಿಕರ ನಡುವೆ 1.5 ಮೀಟರ್ ಅಂತರ ಕಾಪಾಡುವಂತೆಯೂ ಸೂಚಿಸಲಿದೆ. ಪ್ರವೇಶದ್ವಾರದಿಂದ ಹಿಡಿದು ಚೆಕ್ ಇನ್ ಕೌಂಟರ್, ಭದ್ರತಾ ತಪಾಸಣೆ, ಇಮಿಗ್ರೇಶನ್ ಕೌಂಟರ್ ಹಾಗೂ ವಿಮಾನ ಏರುವ ಗೇಟ್‌ಗಳಲ್ಲೂ ಇದು ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಸಂಸ್ಥೆಗಳ ಪ್ರತಿನಿಧಿಗಳ ಜತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಮೊದಲ ಕೆಲ ವಾರಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇರುವುದರಿಂದ 1.5 ಮೀಟರ್ ಅಂತರದ ನಿಯಮ ದಿಲ್ಲಿ, ಮುಂಬೈ, ಹೈದರಾಬಾದ್‌ನಂಥ ದೊಡ್ಡ ವಿಮಾನ ನಿಲ್ದಾಣಗಳಲ್ಲೂ ಸಮಸ್ಯೆಯಾಗದು ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.







