ಲಾಕ್ ಡೌನ್ ನಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ವಿಮೆ ಸಂಸ್ಥೆಗಳ ಮೂಲಕ ಪರಿಹಾರ ನೀಡಿ
ಪ್ರಧಾನಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಮನವಿ
ಬೆಂಗಳೂರು, ಎ.13: ರಾಜ್ಯದ ಹಾಗು ರಾಷ್ಟ್ರದ ರೈತರು ತಾವು ಬೆಳೆದ ಬೆಳೆ ಕೋವಿಡ್-19 ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದು ಮಾರಲಾಗದೆ ನಷ್ಟಕ್ಕೆ ಸಿಲುಕ್ಕಿದ್ದಾರೆ. 2015 ರಿಂದ 12019ರವರೆಗೆ ಪ್ರಧಾನಮಂತ್ರಿ ಫಸಲ್ ಭೀಮ ವಿಮೆ ಯೋಜನೆಯಲ್ಲಿ ಬೆಳೆ ವಿಮೆ ಸಂಸ್ಥೆಗಳು 1 ಲಕ್ಷದ 20 ಸಾವಿರ ಕೋಟಿ ರೂ. ಲಾಭವನ್ನು ಮಾಡಿಕೊಂಡಿದ್ದು ಇತಿಹಾಸ. ಈ ಹಿನ್ನೆಲೆಯಲ್ಲಿ ವಿಮೆ ಸಂಸ್ಥೆಗಳ ಮೂಲಕ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರವನ್ನು ತುರ್ತಾಗಿ ಸರ್ಕಾರದ ಮುಖಾಂತರ ವಿತರಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಮನವಿ ಮೂಲಕ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ನಿರ್ಲಕ್ಷದಿಂದ ರೈತರಿಗೆ ಸಂಕಷ್ಟ ಬಂದಿದೆ. ಈ ಸಮಯದಲ್ಲಿ ರೈತರಿಗೆ ಪ್ಯಾಕೇಜ್ ಗಿಂತ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಾಟ ಹಾಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಕೃಷಿ ಹಾಗು ತೋಟಗಾರಿಕೆ ಇಲಾಖೆ ವತಿಯಿಂದ ಸರ್ಕಾರವು ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರುಕಟ್ಟೆ ದರಕ್ಕೆ ವಿತರಿಸಬೇಕು. ರೈತರು ಬೆಳೆದ ಹಲವು ಕೃಷಿ ಉತ್ಪನ್ನಗಳಲ್ಲಿ ವಾರದೊಳಗೆ ಹಾಳಾಗಬಲ್ಲವುಗಳನ್ನು ಶೀತಲ ಘಟಕಗಳಲ್ಲಿ ಇಡಲು ರೈತರಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಇದನ್ನು ಬಿಟ್ಟು ಮಾನ್ಯ ಬಿ.ಸಿ.ಪಾಟೀಲರ ಪ್ಯಾಕೇಜ್ ಬರಿ ಭರವಸೆಯ ಮಾತುಗಳನ್ನು ಆಡಿಕೊಂಡು ಕಾಲ ಹಾಕುತ್ತಿದ್ದಾರೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮನವಿಯಲ್ಲಿ ತಿಳಿಸಿದ್ದಾರೆ.







