ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ನಿಧನ

ಬೆಂಗಳೂರು , ಎ.13: ಕೇಂದ್ರ ಸರಕಾರದ ಮಾಜಿ ಸಚಿವ ಎಂ.ವಿ ರಾಜಶೇಖರನ್ (92) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಹಲವಾರು ತಿಂಗಳಿಂದ ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಿದ್ದ ರಾಜಶೇಖರನ್ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ರಾಜಶೇಖರನ್ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಎಸ್. ನಿಜಲಿಂಗಪ್ಪರ ಅಳಿಯ.ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆ ರಾಜ್ಯ ಸಚಿವರಾಗಿ ರಾಜಶೇಖರನ್ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ ಗಿರಿಜಾ ರಾಜಶೇಖರ್, ಇಬ್ಬರು ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮುಖ್ಯ ಮಂತ್ರಿ ಬಿಎಸ್ ವೈ ಸಂತಾಪ
ಕೇಂದ್ರದ ಮಾಜಿ ಸಚಿವ ಎಂ ವಿ ರಾಜಶೇಖರನ್ ನಿಧನಕ್ಕೆ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. "ಕೇಂದ್ರದ ಮಾಜಿ ಸಚಿವರಾಗಿದ್ದ ಎಂ ವಿ ರಾಜಶೇಖರನ್ ನಿಧನ ದುಃಖಕರ. ಸರಳ, ಸಜ್ಜನಿಕೆಗಳ ಎಂ ವಿ ಆರ್ ಅವರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ '' ಎಂದು ಸಿಎಂ ಬಿಎಸ್ ವೈ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಸಂತಾಪ
" ಕಾಂಗ್ರೆಸ್ ಪಕ್ಷದ ಹಿರಿಯನಾಯಕ ಎಂ.ವಿ.ರಾಜಶೇಖರನ್ ನಿಧನದಿಂದ ನಾವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ, ಶಾಸಕ-ಸಂಸದರಾಗಿ,ಕೇಂದ್ರ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆಯ ದು:ಖದಲ್ಲಿರುವ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು " ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ







