ಲಾಕ್‌ಡೌನ್ ಉಲ್ಲಂಘನೆ: ವಿದೇಶೀಯರಿಂದ 500 ಬಾರಿ ಕ್ಷಮಾಪಣೆ ವಾಕ್ಯ ಬರೆಸಿದ ಪೊಲೀಸರು!
ಹೊಸದಿಲ್ಲಿ, ಎ.13: ರಿಷಿಕೇಶ್‌ನ ತಪೋವನ್ ಪ್ರದೇಶದ ಸುತ್ತಮುತ್ತ ವಾಸಿಸುತ್ತಿರುವ ಹತ್ತು ಮಂದಿ ವಿದೇಶೀಯರಿಗೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಧಿಸಲಾದ ಶಿಕ್ಷೆ ಎಲ್ಲರಿಗೂ ಅವರ ಶಾಲಾ ಜೀವನವನ್ನು ನೆನಪಿಗೆ ತರಬಹುದು.
ಎಪ್ರಿಲ್ 12ರಂದು ಸಾಯಿ ಗಂಗಾ ಘಾಟ್ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಆರು ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರಿಗೆ ಅಲ್ಲಿನ ಪೊಲೀಸರು ಕಾಗದದ ಹಾಳೆಗಳನ್ನು ನೀಡಿ ‘‘ನಾನು ಲಾಕ್ ಡೌನ್ ನಿಯಮಗಳನ್ನು ಪಾಲಿಸಿಲ್ಲ, ನನ್ನನ್ನು ಕ್ಷಮಿಸಿ,’’ ಎಂದು 500 ಬಾರಿ ಬರೆಸಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಅವಧಿಯಲ್ಲಿ ತಾವು ಹೊರಬಂದು ಗಂಗಾ ತಟದ ಬಳಿ ಧ್ಯಾನಿಸಲು ನಿರ್ಧರಿಸಿದ್ದೇವು ಎಂದು ವಿದೇಶೀಯರು ಪೊಲೀಸರಿಗೆ ಹೇಳಿದ್ದರಲ್ಲದೆ ನಂತರ ಕ್ಷಮೆ ಕೋರಿದ್ದಾರೆ. ಈ ವಿದೇಶೀಯರ ಪೈಕಿ ಲಾಟ್ವಿಯಾ, ಇಸ್ರೇಲ್, ಮೆಕ್ಸಿಕೋ ಹಾಗೂ ಆಸ್ಟ್ರೇಲಿಯಾದ ನಾಗರಿಕರು ಇದ್ದಾರೆ.
ಆದರೆ ಅವರ ಕ್ಷಮೆ ಯಾಚನೆಯಿಂದ ಸಂತುಷ್ಟರಾಗದ ಪೊಲೀಸರು ಅವರಿಂದ ಮೇಲಿನ ವಾಕ್ಯವನ್ನು 500 ಬಾರಿ ಬರೆಸಿ ನಂತರ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
Next Story