ಇಟಲಿಯಲ್ಲಿ ಸೋಂಕು ಆರಂಭಗೊಂಡಾಗ ನಿರ್ಲಕ್ಷ್ಯ!
ಇಟಲಿಯಿಂದ ಏರ್‌ಲಿಫ್ಟ್ ಆಗಿ ಊರು ತಲುಪಿದ್ದ ಮಂಗಳೂರಿನ ಶ್ರೀಮಧು ಭಟ್

ಮಂಗಳೂರು, ಎ. 13: ‘‘ಇಟಲಿಯಲ್ಲಿ ಫೆಬ್ರವರಿ ಅಂತ್ಯಕ್ಕೆ ಕೊರೋನ ಸೋಂಕು ಅಲ್ಲಿನವರನ್ನು ಬಾಧಿಸಲಾರಂಭಿಸಿದ್ದರೂ ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಿಲ್ಲ. ಮಾಸ್ಕ್ ಆಗಲಿ, ಸ್ಯಾನಿಟೈಸರ್ ಬಳಕೆ ಇರಲಿಲ್ಲ. ಮಾರ್ಚ್ 2ನೆ ವಾರಕ್ಕೆ ಅಲ್ಲಿ ಲಾಕ್‌ಡೌನ್ ಆಗುವ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು. ನಿರ್ಲಕ್ಷ್ಯವೇ ಅಲ್ಲಿ ತೀವ್ರ ಅಪಾಯದ ಹಂತ ತಲುಪಲು ಪ್ರಮುಖ ಕಾರಣ’’ ಎನ್ನುತ್ತಾರೆ ಶ್ರೀಮಧು ಭಟ್.
ಸುರತ್ಕಲ್ ಕುಳಾಯಿ ನಿವಾಸಿ ಶಿವರಾಮ್ ಭಟ್ ಹಾಗೂ ಡಾ. ಶೈಲಜಾ ವೈ. ದಂಪತಿಯ ಪುತ್ರಿಯಾಗಿರುವ ಶ್ರೀಮಧು ಭಟ್, ಇಟೆಲಿಯಿಂದ ಮಾ.14ರಂದು ಏರ್‌ಲಿಫ್ಟ್ ಆಗಿ ಹೊಸದಿಲ್ಲಿಗೆ ಆಗಮಿಸಿ, ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಇದೀಗ ತವರು ಮನೆಗೆ ಆಗಮಿಸಿದ್ದಾರೆ. ಮಣಿಪಾಲ ಕಾಲೇಜಿನಲ್ಲಿ ವೈರಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಇಟೆಲಿಯ ಟ್ಯೂರಿನ್ ವಿವಿಯಲ್ಲಿ 3 ವರ್ಷಗಳ ಪಿಎಚ್‌ಡಿ ವ್ಯಾಸಂಗಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಶ್ರೀಮಧು ತೆರಳಿದ್ದರು.
‘‘ಕಳೆದ ಫೆಬ್ರವರಿಯಲ್ಲಿ ಇಟೆಲಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಾಗ ಅಲ್ಲಿನವರು ಇದೊಂದು ಸಾಮಾನ್ಯ ಜ್ವರ. 80 ವರ್ಷ ಮೇಲ್ಪಟ್ಟಟ್ಟವರಿಗೆ ಮಾತ್ರ ತೊಂದರೆ ನೀಡಬಹುದು. ಯುವಕರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಇಲ್ಲಿ ಮೂರು ಪ್ರಕರಣಗಳು 300 ಆದಾಗ ಸಹಜವಾಗಿಯೇ ಆತಂಕ ಕಾಡಲಾರಂಭಿಸಿತು. ಮಾ.10ರಿಂದ ಅಲ್ಲಿ ಲಾಕ್‌ಡೌನ್ ಮಾಡಲಾಯಿತು. ಆದರೆ ಇಂದಿಗೂ ಅಲ್ಲಿ ಲಾಕ್‌ಡೌನ್ ವ್ಯವಸ್ಥೆ ನಮ್ಮ ಭಾರತದಲ್ಲಿರುವಂತೆ ವ್ಯವಸ್ಥಿತವಾಗಿಲ್ಲ. ನಾನಲ್ಲಿ ಇರುವಾಗಲೂ ಸ್ನಾತಕೋತ್ತರ ಪದವಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಕಾಲೇಜುಗಳಿಗೆ ಹೋಗಲು ಅವಕಾಶವಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ದಿನಸಿ ವ್ಯಾಪಾರ ವಹಿವಾಟು ದಿನಪೂರ್ತಿ ತೆರೆದಿತ್ತು. ಆದರೆ ದಿನ ಕಳೆದಂತೆ ಸೋಂಕಿತರು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಲಾರಂಭಿಸಿದಾಗ ಸರಕಾರವೇ ಚಿಕಿತ್ಸಾ ವ್ಯವಸ್ಥೆಗಾಗಿ ಹರ ಸಾಹಸ ಪಡುವಂತಾಯಿತು. ಈ ನಡುವೆ ಅಲ್ಲಿನ ಸ್ಥಳೀಯ ಪ್ರಜೆಗಳಿಗೆ ಚಿಕಿತ್ಸೆಯ ಪ್ರಥಮ ಅವಕಾಶ ಎಂಬ ಮಾತು ಕೇಳಿಬಂದಾಗ ಸಹಜವಾಗಿಯೇ ಆತಂಕ ಸೃಷ್ಟಿಯಾಗಿತ್ತು’’ ಎಂದು ಶ್ರೀಮಧು ಹೇಳುತ್ತಾರೆ.
‘‘ಇಟೆಲಿಯಲ್ಲಿನ ಪರಿಸ್ಥಿತಿಯನ್ನು ಕಂಡು ಮನೆಯಿಂದ ಪೋಷಕರು, ಸ್ನೇಹಿತರು ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಪ್ರತಿಬಾರಿ ಧೈರ್ಯ ತುಂಬಿಸುತ್ತಿದ್ದರು. ಭಾಷೆ ಗೊತ್ತಿಲ್ಲದ, ಊರಿನವರು- ದೇಶದವರು ಸಮೀಪದಲ್ಲಿದ್ದರೂ ಅವರ ಜತೆ ಬೆರೆಯಲಾಗದ ಆ ಪರಿಸ್ಥಿತಿಯಲ್ಲಿ ಆತಂಕ, ಭಯ ಕಾಡದೇ ಇರದು. ಈ ಸಂದರ್ಭ ನಾನು ಇಟೆಲಿಯ ಭಾರತೀಯ ರಾಯಭಾರಿ ಕಚೇರಿಗೆ ಕರೆ ಮಾಡಿ ದೇಶಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿರುವುದಾಗಿ ರಾಯಭಾರ ಕಚೇರಿ ಭರವಸೆ ನೀಡಿತ್ತು. ಅದರಂತೆ ಮಿಲಾನ್‌ನಿಂದ ಉತ್ತರ ಇಟೆಲಿಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 218 ವಿದ್ಯಾರ್ಥಿಗಳನ್ನು ಮಾ. 14ರಂದು ಏರ್‌ಲಿಫ್ಟ್ ವ್ಯವಸ್ಥೆಯ ಮೂಲಕ ಹೊಸದಿಲ್ಲಿಗೆ ತರಿಸಲಾಯಿತು. ಅಲ್ಲಿ ಮಿಲಿಟರಿ ಕ್ಯಾಂಪ್‌ನಲ್ಲಿ 14 ದಿನಗಳ ಕ್ವಾರಂಟೈನ್‌ಗೆ ನಮ್ಮನ್ನು ಒಳಪಡಿಸಲಾಯಿತು’’ ಎಂದು ಅವರು ವಿವರ ನೀಡಿದ್ದಾರೆ.
‘‘ಸಂದಿಗ್ಧ ಪರಿಸ್ಥಿತಿಯ ನಡುವೆ ನಾನು ನನ್ನ ದೇಶಕ್ಕೆ ವಾಪಾಸಾದಾಗ ನಿಜಕ್ಕೂ ಖುಷಿ ಆಗಿತ್ತು. 14 ದಿನಗಳ ಕ್ವಾರಂಟೈನ್‌ಗೆ ಭಾರತ ಸರಕಾರ ಅತ್ಯುತ್ತಮವಾದ ವ್ಯವಸ್ಥೆಯನ್ನು ಮಾಡಿತ್ತು. ಚಪ್ಪಲಿ, ಸೋಪ್‌ನಿಂದ ಹಿಡಿದು ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ಒದಗಿಸಿತ್ತು. ಪೌಷ್ಟಿಕ ಆಹಾರದೊಂದಿಗೆ ಟೇಬಲ್ ಮೇಲೆ ಒಬ್ಬರೇ ಕುಳಿತು ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. 24X7 ಮಾಸ್ಕ್ ಧರಿಸಬೇಕಾಗಿತ್ತು. ಈ ನಡುವೆ ವೈಫೈ ಕೂಡಾ ವ್ಯವಸ್ಥೆಯನ್ನು ಕ್ಯಾಂಪ್‌ನಲ್ಲಿ ಮಾಡುವ ಮೂಲಕ ಇಟೆಲಿಯಿಂದ ಆನ್‌ಲೈನ್ ಪಾಠಕ್ಕೂ ವ್ಯವಸ್ಥೆಯನ್ನು ಕಲ್ಪಿಸಿತ್ತು’’ ಎಂದು ಶ್ರೀಮಧು ಹೇಳಿದ್ದಾರೆ.
ಕೋವಿಡ್- 19 ನಿಯಂತ್ರಣಕ್ಕೆ ಸಂಬಂಧಿಸಿ ನಮ್ಮ ಸರಕಾರ ಉತ್ತಮವಾದ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುವ ಶ್ರೀಮಧು, ಸರಕಾರದ ಆದೇಶಗಳನ್ನು ಪಾಲಿಸುವ ಮೂಲಕ ನಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಕಾಪಾಡುವಲ್ಲಿ ನಾವು ಸಹಕರಿಸಬೇಕು ಎನ್ನುತ್ತಾರೆ. ಈ ಪರಿಸ್ಥಿತಿ ಅದೆಷ್ಟು ಸಮಯ ಮುಂದುವರಿಯಲಿದೆ ಗೊತ್ತಿಲ್ಲ. ಎಲ್ಲವೂ ಸಹಜವಾದ ಬಳಿಕ ನಾನು ಮತ್ತೆ ಇಟೆಲಿಗೆ ಹೋಗಿ ನನ್ನ ವ್ಯಾಸಂಗ ಪೂರ್ಣಗೊಳಿಸಲು ಬಯಸುತ್ತೇನೆ. ಸದ್ಯ ನಾವೆಲ್ಲಾ ಮನೆಯಲ್ಲಿದ್ದು ಸುರಕ್ಷಿತರಾಗಬೇಕಿದೆ’’ ಎಂದು ಹೇಳಲು ಮರೆಯುವುದಿಲ್ಲ ಶ್ರೀಮಧು.
ಬೆಂಗಳೂರಿನಿಂದ ಮಂಗಳೂರು ಬರುವುದೇ ಕಷ್ಟವಾಯಿತು!
ಹೊಸದಿಲ್ಲಿಯ ಮಿಲಿಟರಿ ಕ್ಯಾಂಪ್‌ನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಹೊರಡುವ ವೇಳೆಗೆ ಲಾಕೌಡೌನ್ ಆಗಿತ್ತು. ಹೀಗಾಗಿ ಮಿಲಿಟರಿ ಕ್ಯಾಂಪ್‌ನಲ್ಲೇ ಇರುವಂತೆ ಸೂಚಿಸಿದರು. ಆದರೂ, ವಿದೇಶಾಂಗ ಇಲಾಖೆ ಪತ್ರ ಬರೆದು, ಆಯಾ ರಾಜ್ಯದವರನ್ನು ಕರೆಸಿಕೊಳ್ಳುವಂತೆ ಕೋರಿತ್ತು. ಕರ್ನಾಟಕ ಮೂಲದ 21 ಜನರಿಗೆ ರಾಜ್ಯ ಸರಕಾರ ಬಸ್ ವ್ಯವಸ್ಥೆ ಮಾಡಿತ್ತು. ಹೊಸದಿಲ್ಲಿಯಿಂದ ಎ.8ರಂದು ರಾತ್ರಿ ವಿಶೇಷ ಅನುಮತಿ ಪಡೆದು ಹೊರಟ ಬಸ್ ಉತ್ತರಪ್ರದೇಶ, ಮಧ್ಯಪ್ರದೇಶ ಮೂಲಕ ಎ. 11ರಂದು ಬೆಂಗಳೂರು ತಲುಪಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬರಲು ವಾಹನಕ್ಕೆ ಜಿಲ್ಲಾಡಳಿತದ ಅನುಮತಿ ಬೇಕಿತ್ತು. ನನ್ನ ತಂದೆ ಹಲವು ಸಲ ಜಿಲ್ಲಾಡಳಿತವನ್ನು ಸಂಪರ್ಕಿಸಿದರೂ ಪಾಸ್ ವ್ಯವಸ್ಥೆಯಾಗಲಿಲ್ಲ. ಆಗ ನಮಗೆ ಶಾಸಕ ಯು.ಟಿ. ಖಾದರ್ ಅವರ ಕಾರಿನಲ್ಲೇ ಮನೆಯವರೆಗೆ ತಲುಪಿಸಿದರು.







