ಮಂಗಳವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ, ಎ.13: ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಯಾಗಿದ್ದ 21 ದಿನಗಳ ಲಾಕ್‌ಡೌನ್ ಎಪ್ರಿಲ್ 14(ಮಂಗಳವಾರ)ಕ್ಕೆ ಕೊನೆಯಾಗಲಿದ್ದು, ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ.
ಆರ್ಥಿಕ ಚಟುವಟಿಕೆಗಳನ್ನು ಹಂತಹಂತವಾಗಿ ಆರಂಭಿಸುವ ಕ್ರಮಗಳ ಸಹಿತ ಲಾಕ್‌ಡೌನ್ ಅನ್ನು ಎಪ್ರಿಲ್ 30ರವರೆಗೆ ವಿಸ್ತರಿಸುವ ಕುರಿತು ಪ್ರಧಾನಿಯವರು ಘೋಷಣೆ ಮಾಡುವ ನಿರೀಕ್ಷೆಯಿದೆ. ಶನಿವಾರ 13 ಮುಖ್ಯಮಂತ್ರಿಗಳೊಂದಿಗೆ ಮೋದಿ ನಡೆಸಿದ ವೀಡಿಯೊ ಕಾನ್ಫರೆನ್ಸ್ ಸಂದರ್ಭ ಬಹುತೇಕ ಮುಖ್ಯಮಂತ್ರಿಗಳು ಲಾಕ್‌ಡೌನ್ ವಿಸ್ತರಿಸುವಂತೆ ಸಲಹೆ ನೀಡಿದ್ದರು. ಕೊರೋನ ವೈರಸ್ ವಿರುದ್ಧದ ಸಮರದಲ್ಲಿ ಮೇಲುಗೈ ಸಾಧಿಸಬೇಕಿದ್ದರೆ ಲಾಕ್‌ಡೌನ್ ಇನ್ನಷ್ಟು ಅವಧಿಗೆ ವಿಸ್ತರಿಸಲೇಬೇಕು. ಆದರೆ ಇದರ ಜೊತೆಗೆ, ಜೀವನ ಮತ್ತು ಆರ್ಥಿಕತೆಯನ್ನು ರಕ್ಷಿಸುವ ಅಗತ್ಯವೂ ಇದೆ ಎಂದು ಮೋದಿ ಹೇಳಿದ್ದರು.
ಟ್ರಾಫಿಕ್ ದೀಪಗಳಲ್ಲಿ ಬಳಸುವ ಕೆಂಪು, ಕಿತ್ತಳೆ ಮತ್ತು ಹಸಿರು ಬಣ್ಣದ ಸಂಕೇತವನ್ನು ಇನ್ನು ಮುಂದೆ ಕೊರೋನ ವೈರಸ್ ಸೋಂಕು ಪೀಡಿತ ಮತ್ತು ಸೋಂಕು ರಹಿತ ವಲಯಗಳನ್ನು ಗುರುತಿಸಲು ಹಾಗೂ ಜನರ ಚಲನವಲನದ ಮಾನದಂಡವಾಗಿ ಬಳಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಈ ಕುರಿತೂ ಪ್ರಧಾನಿ ಘೋಷಿಸುವ ನಿರೀಕ್ಷೆಯಿದೆ. ಶನಿವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯ ಬಗ್ಗೆ ಕೇಂದ್ರ ಸರಕಾರ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ, ಸಭೆಯಲ್ಲಿ ಪಾಲ್ಗೊಂಡಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಪ್ರಧಾನಿ ಮೋದಿ ಲಾಕ್‌ಡೌನ್ ವಿಸ್ತರಿಸುವ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.







