ದೇಶಾದ್ಯಂತ ಟ್ರಕ್, ಸರಕು ವಾಹನಗಳಿಗೆ ಅನುಮತಿ ನೀಡುವಂತೆ ರಾಜ್ಯಗಳಿಗೆ ಸೂಚಿಸಿದ ಕೇಂದ್ರ

ನವದೆಹಲಿ: ಅಗತ್ಯ ವಸ್ತುಗಳು ಹಾಗೂ ಇತರ ಸರಕನ್ನು ಸಾಗಾಟ ನಡೆಸುವ ವಾಹನಗಳ ಅಬಾಧಿತ ಸಂಚಾರಕ್ಕೆ ಅನುಮತಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.
ಟ್ರಕ್ ಗಳ ಸಾಗಾಟಕ್ಕೆ ಅನುಮತಿ ನೀಡದೇ ಇದ್ದರೆ ಮುಂದೆ ಲಾಕ್‍ಡೌನ್‍ನಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ ಎದುರಾಗಬಹುದು ಎಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.
ಅಗತ್ಯ ವಸ್ತುಗಳು ಹಾಗೂ ಇತರ ಸರಕು ಸಾಗಾಟ ವಾಹನಗಳನ್ನು ವಶಪಡಿಸಿಕೊಳ್ಳುವ ಹಾಗೂ ಇಂತಹ ವಸ್ತುಗಳ ಉತ್ಪಾದನೆಯ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಂಚಾರಕ್ಕೆ ಅನುಕೂಲಕರವಾಗಲು ಪಾಸುಗಳನ್ನು ನೀಡಲಾಗುತ್ತಿಲ್ಲ ಎಂಬುದು ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಆದುದರಿಂದ ಎಲ್ಲಾ ಟ್ರಕ್ ಗಳು ಹಾಗೂ ಸರಕು ಸಾಗಾಟ ವಾಹನಗಳ ಅಂತರಾಜ್ಯ ಸಂಚಾರಕ್ಕೆ ಅನುಮತಿಸಬೇಕು ಹಾಗೂ ಸರಕು ಹೇರಲು ಸಾಗುವ ಖಾಲಿ ವಾಹನಗಳನ್ನೂ ಅನುಮತಿಸಬೇಕು. ಒಬ್ಬ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಯಿರುವ ಸರಕು ವಾಹನಗಳಿಗೆ ಅನುಮತಿ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.
ಗೋಧಿ ಹಿಟ್ಟು, ಖಾದ್ಯ ತೈಲಗಳು ಮತ್ತಿತರ ಧವಸಧಾನ್ಯಗಳ ಸಂಸ್ಥೆಗಳಿಗೆ ಕೂಡ ಕಾರ್ಯಾಚರಿಸಲು ಅನುಮತಿಬೇಕು. ಕೊರೋನ ಹಾಟ್ ಸ್ಪಾಟ್‍ಗಳು ಹಾಗೂ ಕ್ವಾರಂಟೀನ್ ವಲಯಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಈ ಆದೇಶ ಊರ್ಜಿತವಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.







