ಕರ್ಣಾಟಕ ಬ್ಯಾಂಕ್ : ಚೇರ್ಮನ್ ಜಯರಾಮ ಭಟ್, ಎಂಡಿ, ಸಿಇಒ ಆಗಿ ಮಹಾಬಲೇಶ್ವರ ಪುನರಾಯ್ಕೆ

ಜಯರಾಮ ಭಟ್ - ಮಹಾಬಲೇಶ್ವರ
ಮಂಗಳೂರು : ಕರ್ಣಾಟಕ ಬ್ಯಾಂಕಿನ ಪಿ. ಜಯರಾಮ ಭಟ್ ಚೇರ್ಮನ್ ಆಗಿಯೂ, ಮಹಾಬಲೇಶ್ವರ ಎಂ.ಎಸ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ, ಭಾರತೀಯ ರಿಸರ್ವ್ ಬ್ಯಾಂಕಿನ ಅನುಮೋದನೆಯಂತೆ ಎರಡನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.
ಈ ಆದೇಶದ ಅನ್ವಯ ಪಿ. ಜಯರಾಮ ಭಟ್ ಇವರು 2021ರ ನ.10 ಅವಧಿಯವರೆಗೆ ಚೇರ್ಮೆನ್ ಆಗಿ ಮುಂದುವರೆದರೆ, ಮಹಾಬಲೇಶ್ವರ ಎಂ.ಎಸ್ ಅವರು 2020ರ ಎ.15ರಿಂದ ಮುಂದಿನ ಮೂರು ವರ್ಷಗಳ ಪರ್ಯಂತ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಬ್ಯಾಂಕನ್ನು ಮುನ್ನಡೆಸಲಿದ್ದಾರೆ.
ತಮ್ಮ ಮರು ಆಯ್ಕೆಯ ಸಂದರ್ಭದಲ್ಲಿ ಹರ್ಷವನ್ನು ವ್ಯಕ್ತಪಡಿಸಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್ ಇವರು "ಮೂರು ವರ್ಷಗಳ ಕಾಲ ಬ್ಯಾಂಕಿನ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸುವ ಅವಕಾಶ ದೊರಕಿದುದು ನನ್ನ ಸೌಭಾಗ್ಯ ಮತ್ತು ಹೆಮ್ಮೆಯ ವಿಷಯ ಎಂದು ಭಾವಿಸುವೆ. ಯೋಗಾಯೋಗವೋ ಎಂಬಂತೆ ನನ್ನ ಮಾರ್ಗದರ್ಶಕರಾಗಿರುವ ಪಿ.ಜಯರಾಮ ಭಟ್ ಅವರೂ ಕೂಡ ಎರಡನೇ ಅವಧಿಗೆ ಪುನರ್ ಆಯ್ಕೆಗೊಂಡು ಇನ್ನೂ ಒಂದೂವರೆ ವರ್ಷಗಳ ಕಾಲ ನಮಗೆ ಮಾರ್ಗದರ್ಶನ ನೀಡಲಿದ್ದಾರೆ. ನಾನು ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಆಯ್ಕೆಯಾದಾಗಿನಿಂದಲೂ ಪಿ.ಜಯರಾಮ ಭಟ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ನೀಡಿದ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನಕ್ಕಾಗಿ ಅವರಿಗೆ ವಿಶೇಷ ಕೃತಜ್ಞತೆಗಳು. ಒಂದು ಕೋಟಿಗೂ ಮಿಕ್ಕಿದ ಸಂತೃಪ್ತ ಗ್ರಾಹಕರ ಆಶೀರ್ವಾದ, ಅಹರ್ನಿಷಿ ದುಡಿಯುವ 8500ಕ್ಕೂ ಮಿಕ್ಕಿದ ನನ್ನ ಸಹೋದ್ಯೋಗಿಗಳ ಸಹಕಾರಕ್ಕಾಗಿ ನಾನು ಚಿರಋಣಿ. ಭಾರತೀಯ ರಿಸರ್ವ್ ಬ್ಯಾಂಕಿನ ಅನನ್ಯ ಬೆಂಬಲ ಹಾಗೂ ಮಾರ್ಗದರ್ಶನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ವಿಶ್ವವು ಹಿಂದೆಂದೂ ಕಂಡು ಕೇಳರಿಯದ ಕೋವಿಡ್-19 ವೈರಸ್ ಗೆ ಸಿಕ್ಕಿ ನಲುಗುತ್ತಿದ್ದು ಮುಂದೆ ಆರ್ಥಿಕ ಹಿಂಜರಿತಗಳು ವಿಶ್ವದ ಆರ್ಥಿಕತೆಗೆ ದೊಡ್ಡ ಸವಾಲಾಗುವ ಸಂಶಯಗಳು ವ್ಯಕ್ತವಾಗುತ್ತಲಿವೆ. ಇಂತಹ ಸಂಕಷ್ಟದ ಸ್ಥಿತಿಯನ್ನು ಎದುರಿಸಲು ಕರ್ಣಾಟಕ ಬ್ಯಾಂಕ್ ಸರ್ವಸನ್ನದ್ಧವಾಗಿದೆ. ಉತ್ತಮ ಆಡಳಿತವನ್ನು ನೀಡುವುದು ಹಾಗೂ ಬ್ಯಾಂಕಿನ ಸರ್ವ ಪಾಲುದಾರರ ಮೌಲ್ಯ ಸಂವರ್ಧನೆಗೆ ಅವಿರತ ಶ್ರಮಿಸುವುದಲ್ಲದೆ ಬ್ಯಾಂಕನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಾವು ಕಟಿಬದ್ಧರಾಗಿದ್ದೇವೆ. ಮುಂಬರುವ ದಿನಗಳು ತುಂಬಾ ಫಲಪ್ರದವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿ, ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಿದ್ದೇವೆ. ಬ್ಯಾಂಕಿನ ಆದರಣೀಯ ಗ್ರಾಹಕರ ಹಾಗೂ ಅಭಿಮಾನಿಗಳ ಹೃತ್ಪೂರ್ವಕ ಬೆಂಬಲ ಸದಾ ನಮ್ಮೊಂದಿಗಿದೆ ಎಂಬ ತುಂಬು ಭರವಸೆ ನನಗಿದೆ". ಎಂದು ನುಡಿದರು.







