ಕೊರೋನ ಸೋಂಕು ಪರೀಕ್ಷೆಯ ಉಚಿತ ಕಿಟ್ಗಳು ಬಡವರಿಗೆ ಮಾತ್ರ ಲಭಿಸಬೇಕು: ಸುಪ್ರೀಂ ಸೂಚನೆ
ಹೊಸದಿಲ್ಲಿ, ಎ.13: ಕೊರೋನ ವೈರಸ್ ಸೋಂಕು ಪರೀಕ್ಷೆ ಮಾಡುವ ಉಚಿತ ಕಿಟ್ಗಳನ್ನು ಕಡು ಬಡವರಿಗೆ ಮಾತ್ರ ಒದಗಿಸಬೇಕು. ಜೊತೆಗೆ, ಇತರರಿಗೆ ಒದಗಿಸುವ ಬಗ್ಗೆ ಸರಕಾರ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.
ಕೊರೋನ ಸೋಂಕು ಪರೀಕ್ಷಿಸುವ ಉಚಿತ ಕಿಟ್ಗಳು ಎಲ್ಲರಿಗೂ ಲಭ್ಯವಾಗಬೇಕು ಎಂದು ಕಳೆದ ವಾರ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಎಲ್ಲರಿಗೂ ಉಚಿತ ಕಿಟ್ಗಳನ್ನು ಒದಗಿಸಲು ಅಸಾಧ್ಯ ಎಂದು ಖಾಸಗಿ ಪ್ರಯೋಗಾಲಯಗಳು ತಿಳಿಸಿದ ಬಳಿಕ ತನ್ನ ನಿರ್ಧಾರ ಬದಲಿಸಿದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅರ್ಹ ವ್ಯಕ್ತಿಗಳಿಗೆ ಅಥವಾ ಬಡಜನರಿಗೆ ನೆರವಾಗುವ ಯಾವುದೇ ಯೋಜನೆಯ ಅರ್ಹರಿಗೆ ಉಚಿತ ಪರೀಕ್ಷಾ ಕಿಟ್ಗಳನ್ನು ಒದಗಿಸಬೇಕು. ಅಸಂಘಟಿತ ವಲಯದ ಕಾರ್ಮಿಕರು, ನೇರ ವರ್ಗಾವಣೆ ಯೋಜನೆಯ ಫಲಾನುಭವಿಗಳ ಸಹಿತ ಇತರ ಕಡಿಮೆ ಆದಾಯದ ವರ್ಗದವರಿಗೂ ಉಚಿತ ಕಿಟ್ಗಳನ್ನು ಒದಗಿಸುವ ಬಗ್ಗೆ ಕೇಂದ್ರ ಸರಕಾರ ಅಥವಾ ಆರೋಗ್ಯ ಸಚಿವಾಲಯ ನಿರ್ಧರಿಸಬೇಕು ಮತ್ತು ಈ ಕುರಿತು ಒಂದು ವಾರದೊಳಗೆ ನಿರ್ಧರಿಸಿ ಮಾಹಿತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ.