ಈ ದೇಶದಲ್ಲಿ ಲಾಕ್ಡೌನ್ ಸಂತ್ರಸ್ತರ ನೆರವಿಗೆ ‘ಅಕ್ಕಿ ಎಟಿಎಮ್’

ಸಾಂದರ್ಭಿಕ ಚಿತ್ರ
ಹೊ ಚಿ ಮಿನ್ ಸಿಟಿ (ವಿಯೆಟ್ನಾಮ್), ಎ. 13: ವಿಯೆಟ್ನಾಮ್ನಲ್ಲಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಬೀಗಮುದ್ರೆ ಘೋಷಿಸಿದ ಬಳಿಕ, ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಉಚಿತ ಅಕ್ಕಿ ಕೊಡುವ ಎಟಿಎಂ ಯಂತ್ರವೊಂದನ್ನು ಅಲ್ಲಿನ ಹೊ ಚಿ ಮಿನ್ ಸಿಟಿಯಲ್ಲಿ ಉದ್ಯಮಿಯೊಬ್ಬರು ಸ್ಥಾಪಿಸಿದ್ದಾರೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.
ವಿಯೆಟ್ನಾಮ್ನಲ್ಲಿ ಈವರೆಗೆ 262 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ.
ಅಲ್ಲಿ ಜನರ ಚಲನವಲನವನ್ನು ನಿಲ್ಲಿಸಲು ಮಾರ್ಚ್ 31ರಿಂದ ಬೀಗಮುದ್ರೆ ಘೋಷಿಸಲಾಗಿದೆ. ಹಾಗಾಗಿ, ಸಾವಿರಾರು ಜನರು ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡಿದ್ದಾರೆ.
ಈ ಯಂತ್ರವು 1.5 ಕೆಜಿ ಅಕ್ಕಿಯ ಚೀಲವನ್ನು ನೀಡುತ್ತದೆ. ಬೀದಿ ಬದಿಯ ವ್ಯಾಪಾರಿಗಳು, ಮನೆಗೆಲಸದವರು ಹಾಗೂ ಲಾಟರಿ ಟಿಕೆಟ್ ಮಾರಾಟಗಾರರು ಮುಂತಾದವರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಹನೋಯಿ, ಹ್ಯೂ ಮತ್ತು ದನಂಗ್ ಮುಂತಾದ ಇತರ ನಗರಗಳಲ್ಲೂ ಇಂಥದೇ ‘ಅಕ್ಕಿ ಎಟಿಎಮ್’ಗಳನ್ನು ಸ್ಥಾಪಿಸಲಾಗಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.