ಶೇ.30 ಕಡಿಮೆ ವೇತನ ಪಡೆಯಲು ಸಿಇಸಿ, ಚುನಾವಣಾ ಆಯುಕ್ತರ ನಿರ್ಧಾರ

ಹೊಸದಿಲ್ಲಿ, ಎ.13: ಕೊರೋನ ವೈರಸ್ ಸೋಂಕನ್ನು ತಡೆಯುವ ಪ್ರಯತ್ನಗಳಿಗೆ ಕೊಡುಗೆ ಸಲ್ಲಿಸಲು ಒಂದು ವರ್ಷದ ಅವಧಿಗೆ ಶೇ.30ರಷ್ಟು ಕಡಿಮೆ ಸಂಬಳವನ್ನು ಪಡೆಯಲು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಹಾಗೂ ಚುನಾವಣಾ ಆಯುಕ್ತರಾದ ಅಶೋಕ್ ಲವಾಸಾ ಮತ್ತು ಸುಶೀಲಚಂದ್ರ ಅವರು ಸೋಮವಾರ ನಿರ್ಧರಿಸಿದ್ದಾರೆ.
ಈ ಮೂವರು ಚುನಾವಣಾ ಆಯುಕ್ತರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಸಮನಾಗಿ ವೇತನಗಳನ್ನು ಪಡೆಯುತ್ತಿದ್ದಾರೆ. ಹಾಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮಾಸಿಕ 2.50 ಲ.ರೂ.ವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಕೊರೋನ ವೈರಸ್ ಪಿಡುಗನ್ನು ತಡೆಯಲು ಸರಕಾರವು ಮತ್ತು ಸಾಮಾಜಿಕ ಸಂಘಟನೆಗಳು ಕೈಗೊಂಡಿರುವ ಹಲವಾರು ಕ್ರಮಗಳಿಗೆ ಅಗಾಧ ಸಂಪನ್ಮೂಲದ ಅಗತ್ಯವಿದೆ. ಸರಕಾರದ ಬೊಕ್ಕಸಕ್ಕೆ ವೇತನಗಳ ಹೊರೆ ಕಡಿಮೆ ಮಾಡುವುದು ಸೇರಿದಂತೆ ಎಲ್ಲ ಮೂಲಗಳಿಂದ ದೇಣಿಗೆಗಳು ಇದಕ್ಕೆ ನೆರವಾಗಬಹುದು ಎಂದು ಚುನಾವಣಾ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ. ಚುನಾವಣಾ ಆಯುಕ್ತರ ಒಂದು ವರ್ಷ ಅವಧಿಗೆ ವೇತನ ಕಡಿತವು ಎಪ್ರಿಲ್ 1ರಿಂದ ಅನ್ವಯಗೊಳ್ಳಲಿದೆ ಎಂದೂ ಅದು ತಿಳಿಸಿದೆ.
ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ಹಣವನ್ನು ಕ್ರೋಡೀಕರಿಸಲು ಕೇಂದ್ರವು ಈಗಾಗಲೇ ಒಂದು ವರ್ಷದ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರು ಸೇರಿದಂತೆ ಎಲ್ಲ ಸಂಸದರ ವೇತನಗಳನ್ನು ಒಂದು ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್,ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಎಲ್ಲ ರಾಜ್ಯಪಾಲರು ಸಹ ತಮ್ಮ ವೇತನದ ಶೇ.30ರಷ್ಟನ್ನು ಕೋವಿಡ್-19 ನಿಧಿಗೆ ನೀಡಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ.







