ಕೇರಳದಲ್ಲಿ ಕೊರೋನ ಸೋಂಕು ಪ್ರಕರಣ ಇಳಿಮುಖ

ತಿರುವನಂತಪುರಂ, ಎ.13: ಕೇರಳದಲ್ಲಿ ಕೊರೋನ ವೈರಸ್‌ನ ಗ್ರಾಫ್ ಇಳಿಮುಖವಾಗುತ್ತಿದ್ದು ಕಳೆದ ಒಂದು ವಾರದಲ್ಲಿ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ಕೇರಳದ ವಿತ್ತ ಸಚಿವ ಥಾಮಸ್ ಇಸಾಕ್ ಟ್ವೀಟ್ ಮಾಡಿದ್ದಾರೆ.
ಕೊರೋನ ವೈರಸ್ ಗ್ರಾಫ್ ಎಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಅಂದಾಜು ಮಾಡಲಾದ ಹೊಸ ಪ್ರಕರಣಗಳ ಸಂಖ್ಯೆ. ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣ ಅಂದಾಜು ಮಾಡಿರುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಬೃಹತ್ ಪ್ರಮಾಣದಲ್ಲಿ ಪರೀಕ್ಷೆ ನಡೆಸಿರುವುದು ಹಾಗೂ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿರುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೋನ ವೈರಸ್ ಪ್ರಕರಣವನ್ನು ಅದ್ಭುತವಾಗಿ ನಿಭಾಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯದ ಜನತೆಗೆ ಅಭಿನಂದನೆಗಳು. ಕೇರಳದಲ್ಲಿ ಇದೀಗ ಹೊಸದಾಗಿ ಸೋಂಕು ತಗುಲುವ ಪ್ರಮಾಣಕ್ಕಿಂತ ಕ್ವಾರಂಟೈನ್ ಕೇಂದ್ರಗಳಿಂದ ಬಿಡುಗಡೆಯಾಗುತ್ತಿರುವ ಪ್ರಕರಣ ಹೆಚ್ಚಿದೆ. ಕೊರೋನ ಸೋಂಕು ದ್ವಿತೀಯ ಹಂತಕ್ಕೆ ಹರಡುವುದನ್ನು ನಿಯಂತ್ರಿಸಲಾಗಿದೆ. ಕೊರೋನ ಸೋಂಕಿನಿಂದ ಮೃತಪಡುವ ಪ್ರಮಾಣ ಜಾಗತಿಕವಾಗಿ 5.75%ವಿದ್ದರೆ ಕೇರಳದಲ್ಲಿ ಕೇವಲ 0.58% ಆಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ದೇಶದಲ್ಲಿ ಮೊತ್ತ ಮೊದಲ ಕೊರೋನ ಸೋಂಕು ಪ್ರಕರಣ ದಾಖಲಾಗಿದ್ದು ಕೇರಳದಲ್ಲಿ . ಅತೀ ಹೆಚ್ಚು ಕೊರೋನ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಕಳೆದ ತಿಂಗಳು ಕೇರಳ ಮೊದಲ ಸ್ಥಾನದಲ್ಲಿತ್ತು. ಈಗ ಕೇರಳ 10ನೇ ಸ್ಥಾನದಲ್ಲಿದೆ. ಪೊಸಿಟಿವ್ ವರದಿ ಬಂದ ಪ್ರಕರಣಗಳ ಸಮರ್ಗ ಮಾರ್ಗನಕ್ಷೆ ಬಿಡುಗಡೆ, ಕ್ವಾರಂಟೈನ್‌ನಲ್ಲಿರುವ ಜನರ ಮೇಲೆ ಕಟ್ಟುನಿಟ್ಟಿನ ನಿಗಾ , ಲಾಕ್‌ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಲು ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಬೃಹತ್ ಪ್ರಮಾಣದಲ್ಲಿ ಪೊಲೀಸರ ನಿಯೋಜನೆ ಮುಂತಾದ ಕ್ರಮಗಳಿಂದ ಈ ಮಾರಣಾಂತಿಕ ವೈರಸ್‌ನ ಮೇಲೆ ನಿಯಂತ್ರಣ ಸಾಧಿಸಲು ಕೇರಳಕ್ಕೆ ಸಾಧ್ಯವಾಗಿದೆ. ಆಶಾ ಕಾರ್ಯಕರ್ತೆಯರ ಸಹಿತ 30,000ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಬಗ್ಗೆ ಗಮನ ಹರಿಸಿದ್ದಾರೆ. ಆಹಾರದ ಕಿಟ್, ದೈನಂದಿನ ಬಳಕೆಯ ವಸ್ತುಗಳನ್ನು ಮನೆಬಾಗಿಲಿಗೆ ಪೂರೈಸುವುದು, ವಲಸೆ ಕಾರ್ಮಿಕರ ಸಹಿತ ಬಡವರಿಗೆ ಪ್ರತೀ ಪಂಚಾತಯ್ ವ್ಯಾಪ್ತಿಯಲ್ಲಿ ಸಮುದಾಯ ಅಡಿಗೆ ಮನೆಯಿಂದ ಆಹಾರ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







