ಭೀಮಾ-ಕೋರೆಗಾಂವ್ ಪ್ರಕರಣ: ತೇಲ್ತುಂಬ್ಡೆ, ನವ್ಲಾಖಾ ಬಂಧನ ಕುರಿತು ಸುಪ್ರೀಂ ಆದೇಶಕ್ಕೆ ದಲಿತ ನಾಯಕರ ಖಂಡನೆ

ಹೊಸದಿಲ್ಲಿ, ಎ.13: ಭೀಮಾ-ಕೋರೆಗಾಂವ ಪ್ರಕರಣದಲ್ಲಿ ಸನ್ನಿಹಿತವಾಗಿರುವ ಸಾಮಾಜಿಕ ಹೋರಾಟಗಾರರಾದ ಆನಂದ ತೇಲ್ತುಂಬ್ಡೆ ಮತ್ತು ಗೌತಮ ನವ್ಲಾಖಾ ಅವರ ಬಂಧನವನ್ನು ‘ರಾಷ್ಟ್ರೀಯ ಅವಮಾನ ’ಎಂದು ಸಂಸದರು ಮತ್ತು ಶಾಸಕರು ಸೇರಿದಂತೆ ಹಲವಾರು ದಲಿತ ನಾಯಕರು ಸೋಮವಾರ ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ. ಎ.8ರಂದು ಸರ್ವೋಚ್ಚ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಶರಣಾಗಲು ತೇಲ್ತುಂಬ್ಡೆ ಮತ್ತು ನವ್ಲಾಖಾ ಅವರಿಗೆ ಒಂದು ವಾರದ ಗಡುವನ್ನು ವಿಧಿಸಿತ್ತು. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ಕಳೆದ ತಿಂಗಳು ತಿರಸ್ಕರಿಸಿತ್ತು.
ತನ್ನ ಕಕ್ಷಿದಾರರಿಗೆ 65ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ,ಹೀಗಾಗಿ ಅವರಿಗೆ ಶರಣಾಗಲು ಹೆಚ್ಚು ಸಮಯಾವಕಾಶ ನೀಡಬೇಕು. ಕೊರೋನ ವೈರಸ್‌ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರನ್ನು ಜೈಲಿಗೆ ಕಳುಹಿಸುವುದು ಮರಣ ದಂಡನೆಗೆ ಸಮವಾಗುತ್ತದೆ ಎಂಬ ತೇಲ್ತುಂಬ್ಡೆ ಮತ್ತು ನವ್ಲಾಖಾ ಪರ ವಕೀಲರ ವಾದವನ್ನು ನ್ಯಾಯಾಲಯವು ಪುರಸ್ಕರಿಸಿರಲಿಲ್ಲ.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮದಿನವಾದ ಎ.14ರಂದು ತೇಲ್ತುಂಬ್ಡೆ ಮತ್ತು ನವ್ಲಾಖಾ ಶರಣಾಗಲಿದ್ದಾರೆ. ಅಂಬೇಡ್ಕರ್ ಅವರ ಜನ್ಮದಿನದಂದು ಅವರ ಶರಣಾಗತಿಯು ಭಾರತದ ದಲಿತರು,ಆದಿವಾಸಿಗಳು,ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಹಲವು ರೀತಿಗಳಲ್ಲಿ ಅವಮಾನಕಾರಿಯಾಗಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ,ಗುಜರಾತಿನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ,ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಉದಿತ ರಾಜ್ ಹಾಗೂ ವಂಚಿತ ಬಹುಜನ ಅಘಾಡಿಯ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ದಲಿತ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಮ್ಮ ನಡುವೆ ಪ್ರಜಾಪ್ರಭುತ್ವದ ಜ್ವಾಲೆಯನ್ನು ಜೀವಂತವಾಗಿರಿಸಿರುವ ಸ್ಫೂರ್ತಿಯನ್ನು ದಮನಿಸಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಈ ನಾಯಕರು,ಅತ್ಯಂತ ದಬ್ಬಾಳಿಕೆಯ ಸರಕಾರಗಳೂ ಕೊರೋನ ವೈರಸ್‌ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುತ್ತಿವೆ ಎಂದು ಬೆಟ್ಟು ಮಾಡಿದ್ದಾರೆ. ತೇಲ್ತುಂಬ್ಡೆ ಮತ್ತು ನವ್ಲಾಖಾ ಅವರ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೋರಾಡುವಂತೆ ದಲಿತ,ಒಬಿಸಿ,ಆದಿವಾಸಿ ಮತ್ತು ಅಲ್ಪಸಂಖ್ಯಾತ ನಾಯಕರಿಗೆ ಕರೆ ನೀಡಿರುವ ಅವರು,ಅಂಬೇಡ್ಕರ್ ಹೆಸರಿನಲ್ಲಿ ಒಗ್ಗಟ್ಟಾಗುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.







