ಕೊರೋನ ವೈರಸ್: ಧಾರಾವಿಯಲ್ಲಿ ಪ್ರಕರಣಗಳ ಸಂಖ್ಯೆ 47ಕ್ಕೆ, ಸಾವುಗಳ ಸಂಖ್ಯೆ ಐದಕ್ಕೆ ಏರಿಕೆ
ಮುಂಬೈ, ಎ.13: ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಇನ್ನೂ ನಾಲ್ಕು ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಈ ಪ್ರದೇಶದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 47ಕ್ಕೇರಿದೆ. ರವಿವಾರ 60 ಹರೆಯದ ಸೋಂಕಿತನೋರ್ವ ಮೃತಪಟ್ಟಿದ್ದು,ಸಾವುಗಳ ಸಂಖ್ಯೆ ಐದಕ್ಕೇರಿದೆ.
ಮದೀನಾ ನಗರ,ಜನತಾ ಹೌಸಿಂಗ್ ಸೊಸೈಟಿ ಮತ್ತು ಗುಲ್‌ಮೊಹರ್ ಚಾಳ್‌ಗಳಿಂದ ತಲಾ ಒಂದು ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಈ ಹಿಂದೆ ಸಂಗ್ರಹಿಸಲಾಗಿದ್ದ ನೆಹರು ಚಾಳ್‌ನ 60 ಹರೆಯದ ವ್ಯಕ್ತಿಯ ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬಂದಿದ್ದು,ಆತನಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಇದೀಗ ಆತನ ಸಂಪರ್ಕ್ಕೆ ಬಂದಿದ್ದ ವ್ಯಕ್ತಿಗಳ ಪತ್ತೆಗಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಪ್ರಯತ್ನಿಸುತ್ತಿದೆ.
ಧಾರಾವಿಯ ಇಕ್ಕಟ್ಟಾದ ಓಣಿಗಳಲ್ಲಿಯ ಕೊಳಕು ಪರಿಸರಗಳಲ್ಲಿ ಸುಮಾರು ಏಳು ಲಕ್ಷ ಜನರು ವಾಸವಾಗಿದ್ದು, ಈ ಪ್ರದೇಶದಲ್ಲ್ಲಿ ಸೋಂಕು ತ್ವರಿತವಾಗಿ ಹರಡಬಹುದು ಎಂದು ಅಧಿಕಾರಿಗಳು ಕಳವಳಗೊಂಡಿದ್ದಾರೆ. ಧಾರಾವಿಯಲ್ಲಿ ಒಂಭತ್ತು ಹಾಟ್‌ಸ್ಪಾಟ್ ಗಳನ್ನು ಈಗಾಗಲೇ ಘೋಷಿಸಲಾಗಿದ್ದು,ಇಂತಹ ಇನ್ನಷ್ಟು ಸ್ಥಳಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.