ಗುಳೆ ಹೊರಟ ಗರ್ಭಿಣಿ ಸಹಿತ 10 ಮಂದಿ ಕಾರ್ಮಿಕರ ರಕ್ಷಣೆ

ಉಡುಪಿ ಎ.13: ಲಾಕ್‌ಡೌನ್‌ನಿಂದ ಕಂಗೆಟ್ಟು ಮಣಿಪಾಲದಿಂದ ಹೂಟ್ಟೂರು ಧಾರವಾಡಕ್ಕೆ ಕಾಲ್ನಡಿಗೆಯಲ್ಲಿ ಹೊರಟು ಬ್ರಹ್ಮಾವರದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಗರ್ಭಿಣಿ ಮತ್ತು ಮೂವರು ಮಹಿಳೆಯರ ಸಹಿತ 10 ಮಂದಿ ಕಾರ್ಮಿಕರನ್ನು ರಕ್ಷಿಸಿರುವ ಘಟನೆ ಎ.12ರಂದು ನಡೆದಿದೆ.
ಲಾಕ್‌ಡೌನ್‌ಗೆ ನಾಲ್ಕು ದಿನದ ಮೊದಲು ಉಡುಪಿಗೆ ಆಗಮಿಸಿದ ಕಾರ್ಮಿಕ ಕುಟುಂಬ, ಕೈಯಲ್ಲಿ ಹಣ ಇಲ್ಲದೆ ಮಧ್ಯಾಹ್ನದ ಊಟವನ್ನು ಮಾತ್ರ ಸೇವಿಸಿ ಬದುಕುತ್ತಿದ್ದರು. ಇದೀಗ ಲಾಕ್‌ಡೌನ್ ಮುಂದುವರಿಯುವ ಭೀತಿಯಲ್ಲಿ ಇವರೆಲ್ಲ ತಮ್ಮ ಊರಿಗೆ ಹೊರಟಿದ್ದರು. ಇವರೊಂದಿಗೆ 5 ತಿಂಗಳ ಗರ್ಭಿಣಿ ಮಹಿಳೆ ಹಾಗೂ 3 ವರ್ಷದ ಒಂದು ಮಗುವೂ ಜೊತೆಗೆ ಇದ್ದರು.
ರಾತ್ರಿ ವೇಳೆ ಅಸಹಾಯಕ ಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಇವರನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಕುಟುಂಬಕ್ಕೆ ಧೈರ್ಯ ತುಂಬಿ, 15 ದಿನಗಳ ಆಹಾರದ ಜವಾಬ್ದಾರಿಯನ್ನು ತಾನು ನಿರ್ವಹಿಸುವ ಭರವಸೆ ನೀಡಿದರು.
ಈ ಕುರಿತು ವಿಶು ಶೆಟ್ಟಿ ಉಡುಪಿಯ ತಹಶೀಲ್ದಾರ್ ರಿಗೆ ಮಾಹಿತಿ ನೀಡಿದರು. ಬಳಿಕ ಕಾರ್ಮಿಕರನ್ನು ಬ್ರಹ್ಮಾವರದಿಂದ ವಿಶು ಶೆಟ್ಟಿ ಹಾಗೂ ತಹಶೀಲ್ದಾರ್ ವಾಹನದಲ್ಲಿ ಮಣಿಪಾಲಕ್ಕೆ ಕರೆತಂದು ಅವರ ವಾಸಸ್ಥಳಕ್ಕೆ ತಲುಪಿಸಿ, ರಾತ್ರಿಯ ಊಟದ ವ್ಯವಸ್ಥೆ ಮಾಡಲಾಯಿತು. 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ವಿಶು ಶೆಟ್ಟಿ ನೀಡಿದ್ದಾರೆ.







