ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಸಂಸ್ಥೆಗಳಿಗೆ ನಿರಾಳ: ದಿವಾಳಿತನ ಕಾನೂನಿನಲ್ಲಿ ಮಾರ್ಪಾಡಿಗೆ ನಿರ್ಧಾರ

ಹೊಸದಿಲ್ಲಿ, ಎ.13: ಕೊರೋನ ವೈರಸ್ ಸೋಂಕಿನಿಂದಾಗಿ ಜಾರಿಗೆ ಬಂದಿರುವ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಸಂಸ್ಥೆಗಳಿಗೆ ದಿವಾಳಿತನ ಪ್ರಕ್ರಿಯೆಯಿಂದ ಕೆಲ ಸಮಯ ವಿನಾಯಿತಿ ನೀಡುವ ಹೊಸ ಕಾಯ್ದೆಯನ್ನು ರೂಪಿಸಲಾಗಿದ್ದು ಇದನ್ನು ಕೇಂದ್ರ ಸರಕಾರ ವಿಶೇಷ ಆದೇಶದ ಮೂಲಕ ಜಾರಿಗೆ ತರುವ ನಿರೀಕ್ಷೆಯಿದೆ.
2016ರಲ್ಲಿ ಜಾರಿಗೆ ಬಂದಿದ್ದ ದಿವಾಳಿತನ ಕಾಯ್ದೆಯಡಿ, ಸಂಸ್ಥೆಗಳು ಸಾಲ ಮರುಪಾವತಿಸುವಲ್ಲಿ ಒಂದು ದಿನ ವಿಳಂಬಿಸಿದರೂ ಆ ಸಂಸ್ಥೆಯನ್ನು ಎನ್‌ಪಿಎ(ಅನುತ್ಪಾದಕ ಆಸ್ತಿ) ವಿಭಾಗದಡಿ ಸೇರಿಸಬಹುದಾಗಿತ್ತು. ಈ ಕಾಯ್ದೆಗೆ ಹೊಸದಾಗಿ ಸೇರಿಸಿರುವ ಪರಿಚ್ಛೇದದಂತೆ, ದಿವಾಳಿತನ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳು ನಡೆಸುವಂತಿಲ್ಲ. ಕೊರೋನ ವೈರಸ್‌ನ ಹಾವಳಿ ಯಾವ ರೀತಿ ಮುಂದುವರಿಯುತ್ತದೆ ಎಂಬುದನ್ನು ಆಧರಿಸಿ ಈ ಅವಧಿಯನ್ನು ಮುಂದುವರಿಸಲೂ ಅವಕಾಶವಿದೆ. ಇದರರ್ಥ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗಳು ಸಾಲ ಮರುಪಾವತಿಸದಿದ್ದರೆ ‘ಕೆಂಪು ವಲಯ’ಕ್ಕೆ ಸೇರ್ಪಡೆಗೊಳ್ಳುವುದಿಲ್ಲ. ಆದರೆ ಈಗಾಗಲೇ ದಿವಾಳಿತನ ಪ್ರಕ್ರಿಯೆಗೆ ಚಾಲನೆ ದೊರಕಿರುವ ಸಂಸ್ಥೆಗಳಿಗೆ ಹೊಸ ಕಾಯ್ದೆ ಅನ್ವಯಿಸುವುದಿಲ್ಲ.
ಸುದೀರ್ಘ ಲಾಕ್‌ಡೌನ್‌ನಿಂದಾಗಿ ಹಲವು ಸಂಸ್ಥೆಗಳು ಸಾಲ ಮರುಪಾವತಿಸಿಲ್ಲ. ಸಾಮಾನ್ಯ ಸಂದರ್ಭದಲ್ಲಿ ಇಂತಹ ಸಂಸ್ಥೆಗಳ ವಿರುದ್ಧ ಸಾಲದಾತರು ಕ್ರಮ ಕೈಗೊಳ್ಳಲು ಅವಕಾಶವಿತ್ತು.
ಲಾಕ್‌ಡೌನ್ ಪ್ರಕ್ರಿಯೆ ಎಪ್ರಿಲ್ 30ರ ಬಳಿಕವೂ ಮುಂದುವರಿದರೆ ದಿವಾಳಿತನ ಕಾಯ್ದೆಯ ಕೆಲವು ಸೆಕ್ಷನ್‌ಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವನೆಯನ್ನು ಸರಕಾರ ಪರಿಶೀಲಿಸಲಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಘೋಷಿಸಿದ್ದಾರೆ.





