ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿರುವ 19 ಭಾರತೀಯರು

ದುಬೈ, ಎ. 13: ಭಾರತದಲ್ಲಿ ಬೀಗಮುದ್ರೆ ಘೋಷಿಸಿದಂದಿನಿಂದ 19 ಭಾರತೀಯರು ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಅವರು ದಣಿದಿದ್ದಾರೆ, ಮನೆಯ ಬಗ್ಗೆಯೇ ಯೋಚಿಸುತ್ತಿದ್ದಾರೆ ಹಾಗೂ ಮನೆಗೆ ಮರಳುವುದನ್ನು ಹತಾಶರಾಗಿ ಎದುರು ನೋಡುತ್ತಿದ್ದಾರೆ ಎಂದು ಅದು ಹೇಳಿದೆ.
ನೂತನ-ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಒಳಬರುವ ವಿಮಾನಗಳನ್ನು ನಿಲ್ಲಿಸಿದಾಗ ಅವರ ಪೈಕಿ ಹೆಚ್ಚಿನವರು ಪ್ರಯಾಣ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಅವರು ವಿಮಾನ ನಿಲ್ದಾಣದ ಬೆಂಚುಗಳನ್ನೇ ತಮ್ಮ ಮನೆಯಾಗಿಸಿಕೊಂಡಿದ್ದರು.
ಅವರೆಲ್ಲರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಅವರು ಸೋಂಕುರಹಿತರಾಗಿರುವುದು ಪತ್ತೆಯಾಯಿತು. ಬಳಿಕ ಅವರನ್ನು ಮಾರ್ಚ್ 25ರಂದು ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊಟೇಲ್‌ಗೆ ಸ್ಥಳಾಂತರಿಸಲಾಯಿತು. ಪ್ರಸಕ್ತ ಅವರೆಲ್ಲರೂ ವಿಮಾನ ನಿಲ್ದಾಣದ ಹೊಟೇಲ್‌ನಲ್ಲೇ ಇದ್ದಾರೆ.
ಅವರ ಪೈಕಿ ಒಬ್ಬರು ಮಾರ್ಚ್ 22ರಂದು ಮಾರ್ಚ್ 22ರಂದು ಅಹ್ಮದಾಬಾದ್‌ಗೆ ತೆರಳುವ ಮುಂಜಾನೆ 4 ಗಂಟೆಯ ವಿಮಾನವನ್ನು ತಪ್ಪಿಸಿಕೊಂಡಿರುವ ಅರುಣ್ ಸಿಂಗ್. ಅಂದು ವಿಮಾನ ಹತ್ತಬೇಕಾದ ಹೊತ್ತಿನಲ್ಲಿ ನಿದ್ದೆಗೆ ಜಾರಿದ್ದರಿಂದ ಅವರು ವಿಮಾನ ನಿಲ್ದಾಣದಲ್ಲೇ ಬಾಕಿಯಾಗಬೇಕಾಯಿತು.
‘‘ಅಂದು ಆ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗಾಗಿ ಈಗ ದಿನದ ಹೆಚ್ಚಿನ ಸಮಯವನ್ನು ನಿದ್ದೆ ಮಾಡುತ್ತಲೇ ಕಳೆಯುತ್ತಿದ್ದೇನೆ’’ ಎಂದು ಯುಎಇ ಬ್ಯಾಂಕೊಂದರಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸಿಂಗ್ ಹೇಳುತ್ತಾರೆ.







