ತಲಪಾಡಿ ಗಡಿಭಾಗಕ್ಕೆ ಸಂಸದ, ಸಚಿವ ಭೇಟಿ
ಮಂಗಳೂರು, ಎ.13: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾರ್ಯಕ್ರಮಗಳಲ್ಲಿ ಸೋಮವಾರ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಲಪಾಡಿ ಗಡಿಭಾಗಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ ಮೇಲಿನ ತಲಪಾಡಿಯ ಜನರ ಬಳಿ ಗುರುತಿನ ಚೀಟಿ ಇದ್ದು, ಅದನ್ನು ತೋರಿಸಿ ಬರಲು ಅವಕಾಶ ನೀಡಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಮೇಲಿನ ತಲಪಾಡಿ ಎಂದು ಹೇಳಿ ಕೇರಳ ಭಾಗದಿಂದಲೂ ಜನರು ಗಡಿದಾಟಿ ಬರುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡಲಾಗದು ಎಂದರು. ಅಲ್ಲದೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಎಸಿಪಿ ಕೋದಂಡರಾಮ ಅವರಿಗೆ ಸೂಚಿಸಿದರು.
ಬಳಿಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೊರೋನ ನಿಯಂತ್ರಿಸುವ ಅನಿವಾರ್ಯತೆಯಿಂದ ಕೇರಳ ಅಥವಾ ಹೊರ ಜಿಲ್ಲೆಗಳ ಜನರು ದ.ಕ.ಜಿಲ್ಲೆ ಪ್ರವೇಶಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ ನಿರ್ದೇಶನದ ಮೇರೆಗೆ ಕೇರಳದಿಂದ ತುರ್ತು ಚಿಕಿತ್ಸೆಗೆ ಬರುವವರಿಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ವೈದ್ಯರ ತಂಡ ಪರಿಶೀಲಿಸಿ, ಸೋಂಕು ಇಲ್ಲ ಎಂದು ದೃಢಪಡಿಸಿದ ಬಳಿಕವಷ್ಟೇ ರಾಜ್ಯದ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದರು.
ಇದೀಗ ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು ಕೇವಲ ಐದು ಪ್ರಕರಣಗಳು ಮಾತ್ರ ಇದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಈ ಸಂದರ್ಭ ಜಿಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಮತ್ತಿತರರು ಉಪಸ್ಥಿತರಿದ್ದರು.







