ಕೊರೋನ ಜತೆ ಮಲೇರಿಯಾ, ಡೆಂಗ್ ಬಗ್ಗೆ ಇರಲಿ ಎಚ್ಚರ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಎ.13: ಕಳೆದ ವರ್ಷ ಮಂಗಳೂರಿನಲ್ಲಿ ಡೆಂಗ್ ಮಲೇರಿಯಾ ಪ್ರಕರಣ ಅಧಿಕ ವರದಿಯಾಗಿತ್ತು. ಡೆಂಗ್ ಹಾವಳಿ ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ, ಸದ್ಯ ಕೊರೊನಾ ಆತಂಕವಿದ್ದರೂ, ಅದನ್ನು ಎದುರಿಸುವ ಜತೆಗೆ ಮಲೇರಿಯಾ ಡೆಂಗ್ ಬಗ್ಗೆಯೂ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೇಳಿದ್ದಾರೆ.
ಮಲೇರಿಯಾ ಡೆಂಗ್ ಜ್ವರದ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮೇಯರ್ ದಿವಾಕರ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಕಳೆದ ವರ್ಷ ನಗರದಲ್ಲಿ ಡೆಂಗ್ಯೂ ಪ್ರಕರಣ ಅಧಿಕವಾಗಿ ಹಲವು ಪ್ರಾಣಹಾನಿ ಸಂಭವಿಸಿತು. ಜತೆಗೆ ಮಲೇರಿಯಾದಿಂದಲೂ ಸಾಕಷ್ಟು ಸಮಸ್ಯೆ ಆಗಿತ್ತು. ಈ ಬಾರಿ ಇಂತಹ ಸಮಸ್ಯೆ ಎದುರಾಗಬಾರದು. ಇದಕ್ಕಾಗಿ ಅಧಿಕಾರಿಗಳ ತಂಡ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಇದರಲ್ಲಿ ಯಾವುದೇ ಲೋಪಗಳಾಗಬಾರದು. ಕೊರೋನ ಎದುರಿಸುವ ಜತೆಗೆ ಡೆಂಗ್ಯೂ, ಮಲೇರಿಯಾ ಎದುರಿಸುವಲ್ಲಿಯೂ ಆದ್ಯತೆ ನೀಡಬೇಕು ಎಂದರು.
ಉಪಮೇಯರ್ ವೇದಾವತಿ, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.







