ಸರ್ವಾಧಿಕಾರ ಮತ್ತು ಫ್ಯಾಶಿಸಂಗೆ ಅಂಬೇಡ್ಕರ್ ಮದ್ದು
ಇಂದು ಅಂಬೇಡ್ಕರ್ ಜನ್ಮದಿನ

ಬಾಬಾ ಸಾಹೇಬರ ಚಿಂತನೆಗಳಲ್ಲಿ ಸರ್ವಾಧಿಕಾರ ಮತ್ತು ಫ್ಯಾಶಿಸಂ ಕುರಿತಂತೆ ಪ್ರಖರವಾದ ಚರ್ಚೆ ಇರುವುದಷ್ಟೆ ಅಲ್ಲ ಇವುಗಳಿಗೆ ಮದ್ದನ್ನೂ ಸೂಚಿಸುತ್ತಾರೆ. ಪ್ರಜಾಪ್ರಭುತ್ವ ಸರಕಾರದಲ್ಲಿ ಸರ್ವಾಧಿಕಾರ ರೂಪುಗೊಳ್ಳುವ ಆರಂಭಿಕ ಹಂತದಲ್ಲಿ ಒಂದು ದೇಶದ ಸ್ಥಿತಿಯನ್ನು ಬಾಬಾ ಸಾಹೇಬರು ಗುರುತಿಸುತ್ತಾರೆ. ಪ್ರಜೆಗಳ ಅಸಹಾಯಕತೆಯು ಸರ್ವಾಧಿಕಾರಿ ಮನೋಧರ್ಮಕ್ಕೆ ಸಹಕರಿಸುತ್ತದೆ. ಹದಗೆಟ್ಟ ಆಡಳಿತ, ದುರ್ಬಲ ಕಾನೂನು ವ್ಯವಸ್ಥೆ, ನ್ಯಾಯಾಂಗದ ವೈಫಲ್ಯ, ಅರಾಜಕತೆ, ಆರ್ಥಿಕ ಅಸ್ಥಿರತೆ ಎಲ್ಲವೂ ಒಟ್ಟಾಗಿ ಇಡಿಯಾದ ಅಧಿಕಾರವನ್ನು ಏಕೈಕ ಆಡಳಿತಗಾರ ತನ್ನ ಕೈವಶ ಮಾಡಿಕೊಳ್ಳುತ್ತಾನೆ.
ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಲೋಚನೆಯಲ್ಲಿ ‘ಸರ್ವಾಧಿಕಾರ’ ಫ್ಯಾಶಿಸಂ ಬಗೆಗಿನ ಚಿಂತನೆಯಿದೆ. ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ವಿವರಿಸುವಾಗ ಈ ತಿಳಿವು ಮುನ್ನೆಲೆಗೆ ಬರುತ್ತದೆ. ಈ ಹೊತ್ತು ಭಾರತ, ಅಮೆರಿಕವನ್ನು ಒಳಗೊಂಡಂತೆ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಬಹುತೇಕ ರಾಷ್ಟ್ರಗಳ ನಡೆಗಳಲ್ಲಿ ಸರ್ವಾಧಿಕಾರ ಮತ್ತು ಫ್ಯಾಶಿಸಂ ಢಾಳಾಗಿಯೇ ಕಾಣುತ್ತಿದೆ. ಹಾಗಾಗಿ ಅಂಬೇಡ್ಕರರ ಈ ಚಿಂತನೆ ಹೆಚ್ಚು ಪ್ರಸ್ತುತವಾಗಿದೆ.
ಚಿಂತಕರಾದ ಶಿವಸುಂದರ್ ವಿವರಿಸುವಂತೆ, ‘ಸರ್ವಾಧಿಕಾರವೆಂದರೆ ವಿವಿಧ ಅಂಗಗಳಲ್ಲಿದ್ದ ಅಧಿಕಾರಗಳೆಲ್ಲವೂ ಒಬ್ಬ ವ್ಯಕ್ತಿಯಲ್ಲಿ ಕೇಂದ್ರೀಕರಣಗೊಳ್ಳುವುದು, ನಾಗರಿಕ ಹಕ್ಕುಗಳೆಲ್ಲವನ್ನೂ ಮಟುಕಾಗಿಸುವಂತೆ ಮೇಲಿನಿಂದ ಹೇರಲ್ಪಡುವ ಪ್ರಜಾತಂತ್ರದ ಬಿಕ್ಕಟ್ಟು. ಫ್ಯಾಶಿಸಂ ಸರ್ವಾಧಿಕಾರ ಮಾತ್ರವಲ್ಲ, ಈ ಕ್ರೌರ್ಯದಲ್ಲಿ ಬಹುಸಂಖ್ಯಾತರ ಸಮ್ಮತಿಯೊಂದಿಗೆ ಕಲ್ಪಿತ ಶತ್ರುಗಳ ಸ್ವಾತಂತ್ರ ಹರಣವೂ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಫ್ಯಾಶೀಕರಣಗೊಂಡ ಬಹುಸಂಖ್ಯಾತರು ಸಾವಿರಾರು ವರ್ಷಗಳ ನಾಗರಿಕ ಸಹಜೀವನದ ಮಾನವೀಯ ಮೌಲ್ಯಗಳನ್ನು ನಾಶಗೊಳಿಸುತ್ತಾರೆ. ಫ್ಯಾಶಿಸಂ ಪ್ರಜಾತಂತ್ರದ ಬಿಕ್ಕಟ್ಟು ಮಾತ್ರವಲ್ಲ ಇಡೀ ನಾಗರಿಕತೆಯ ಬಿಕ್ಕಟ್ಟು’ ಎಂದು ಸೂಚ್ಯವಾಗಿ ವಿವರಿಸುತ್ತಾರೆ. ಬಾಬಾ ಸಾಹೇಬರ ಚಿಂತನೆಗಳಲ್ಲಿ ಸರ್ವಾಧಿಕಾರ ಮತ್ತು ಫ್ಯಾಶಿಸಂ ಕುರಿತಂತೆ ಪ್ರಖರವಾದ ಚರ್ಚೆ ಇರುವುದಷ್ಟೆ ಅಲ್ಲ ಇವುಗಳಿಗೆ ಮದ್ದನ್ನೂ ಸೂಚಿಸುತ್ತಾರೆ.
ಪ್ರಜಾಪ್ರಭುತ್ವ ಸರಕಾರದಲ್ಲಿ ಸರ್ವಾಧಿಕಾರ ರೂಪುಗೊಳ್ಳುವ ಆರಂಭಿಕ ಹಂತದಲ್ಲಿ ಒಂದು ದೇಶದ ಸ್ಥಿತಿಯನ್ನು ಬಾಬಾಸಾಹೇಬರು ಗುರುತಿಸುತ್ತಾರೆ. ಪ್ರಜೆಗಳ ಅಸಹಾಯಕತೆಯು ಸರ್ವಾಧಿಕಾರಿ ಮನೋಧರ್ಮಕ್ಕೆ ಸಹಕರಿಸುತ್ತದೆ. ಹದಗೆಟ್ಟ ಆಡಳಿತ, ದುರ್ಬಲ ಕಾನೂನು ವ್ಯವಸ್ಥೆ, ನ್ಯಾಯಾಂಗದ ವೈಫಲ್ಯ, ಅರಾಜಕತೆ, ಆರ್ಥಿಕ ಅಸ್ಥಿರತೆ ಎಲ್ಲವೂ ಒಟ್ಟಾಗಿ ಇಡಿಯಾದ ಅಧಿಕಾರವನ್ನು ಏಕೈಕ ಆಡಳಿತಗಾರ ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಈ ಬಲಿಷ್ಠ ವ್ಯಕ್ತಿ ಅಸಹಾಯಕರಿಗೆ ಧೈರ್ಯ ತುಂಬಲು ಬರುತ್ತಾನೆ. ಇದು ಪಟ್ಟಣ, ಗಲ್ಲಿಗಳಿಗೆ ಸೀಮಿತವಾದರೆ, ಇಂಥವನನ್ನು ‘ದಾದ’ ‘ಗೂಂಡಾ’ ಎನ್ನಬಹುದು. ಇದನ್ನೇ ದೇಶಕ್ಕೆ ವಿಸ್ತರಿಸಿದರೆ ಆತ ಸರ್ವಾಧಿಕಾರಿಯಾಗುತ್ತಾನೆ, ಅಲ್ಲಿ ಫ್ಯಾಶಿಸಂ ಜನ್ಮತಾಳುತ್ತದೆ (ಸಂಪುಟ:22,ಪುಟ:445-52). ದೇಶದ ಜನರಲ್ಲಿ ನೂರಾರು ಆಸೆಗಳು ಗರಿಗೆದರುತ್ತವೆ. ದೇಶವನ್ನು ವಿಶ್ವದಲ್ಲೇ ಪ್ರಕಾಶಿಸುವಂತೆ ಮಾಡುತ್ತೇನೆ, ನಿರುದ್ಯೋಗ ಹೇಳಹೆಸರಿಲ್ಲದೆ ಅಳಿಯುತ್ತದೆ, ದೇಶ ವಿಶ್ವಕ್ಕೆ ಗುರುವಾಗುತ್ತದೆ ಮುಂತಾದ ಭ್ರಮೆಗಳಲ್ಲಿ ಜನರನ್ನು ತೇಲಿಸಲಾಗುತ್ತದೆ. ಕಡೆಯದಾಗಿ ಡಾರ್ವಿನನ ‘ಬಲವಿದ್ದವರು ಬದುಕುಳಿಯುತ್ತಾರೆ’ ಎಂಬ ತತ್ವ ಅನುಷ್ಠಾನಕ್ಕೆ ಬರುತ್ತದೆ.
1920ರ ವೇಳೆಗೆ ಮೊದಲನೇ ಮಹಾಯುದ್ಧದ ನಂತರದಲ್ಲಿ ಕಾಲಿಟ್ಟ ಆಧುನಿಕ ಸರ್ವಾಧಿಕಾರದ ರಾಜಕೀಯ ಪ್ರಣಾಳಿಕೆಯೆ ಫ್ಯಾಶಿಸಂ. ಇದರ ಜನಕ ಬೆನಿತೊ ಮುಸ್ಸೋಲಿನಿ. ‘ಪ್ಯಾಶಿಯೋ’ ಎಂದರೆ ಕಟ್ಟಿಗೆಯ ಕಟ್ಟಿನಲ್ಲಿ ಕಟ್ಟಲಾದ ಕೊಡಲಿ. ಇದೊಂದು ರೀತಿಯಲ್ಲಿ ಬೇಟೆಗಾರನ ಜತೆ ಬೇಟೆಗಳು ಬದುಕಿದಂತೆ. ಈ ಪ್ಯಾಶಿಯೋ ಪದದಿಂದಲೇ ಫ್ಯಾಶಿಸಂ ಜನ್ಮತಾಳಿದೆ. ಇದು ರೋಮ್ ಸಾಮ್ರಾಜ್ಯದ ಚಿನ್ಹೆಯೂ ಆಗಿತ್ತು. ಮುಂದೆ ಬೆಳೆದ ಸಮ್ರಾಜ್ಯಶಾಹಿ ಮತ್ತು ಯುದ್ಧದಾಹದ ಪ್ರವೃತ್ತಿಗೂ ಇದು ಗುರುತಾಯಿತು.(22-445-52) ಇಟಲಿಯಲ್ಲಿ ಮುಸ್ಸೋಲಿನಿ, ಜರ್ಮನಿಯಲ್ಲಿ ಹಿಟ್ಲರ್ ದೇಶದಲ್ಲಿನ ಜನರ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡೆ ಸರ್ವಾಧಿಕಾರ ಸ್ಥಾಪಿಸಿದರು ಎನ್ನುವುದನ್ನು ಅಂಬೇಡ್ಕರ್ ವಿವರಿಸುತ್ತಾರೆ. ಕಾರ್ಪೊರೇಟ್ ಜಗತ್ತು ವ್ಯಾಪಕವಾಗಿ ಬೆಳೆದಂತೆ, ಪ್ರಭುತ್ವ ಅದರ ಜೊತೆ ಮಿಳಿತವಾಗಿ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಇದೆಲ್ಲವನ್ನೂ ಸಮ್ಮತಿಸುವ ಪ್ಯಾಶೀಕರಣಗೊಂಡ ಬಹುಸಂಖ್ಯಾತರು, ಪ್ರಭುತ್ವವೇ ಹುಟ್ಟು ಹಾಕಿದ ಕಲ್ಪಿತ ಶತ್ರುಗಳ ಸ್ವಾತಂತ್ರದ ಬಗ್ಗೆ ಆತಂಕಿತರಾಗುತ್ತಾರೆ. ಕಲ್ಪಿತ ಶತ್ರುಗಳಲ್ಲಿನ ಆತಂಕವು ತಮ್ಮ ಸ್ವಾತಂತ್ರದ ಬಗೆಗೆ ಭಯ ಹುಟ್ಟಿಸುತ್ತದೆ. ಈ ಹೊತ್ತಿನ ಭಾರತದಲ್ಲಾದರೆ ಬಹುಸಂಖ್ಯಾತ ಹಿಂದೂಗಳಲ್ಲಿ ಕಲ್ಪಿತ ಶತ್ರುಗಳಾದ ಮುಸ್ಲೀಮರ ಬಗೆಗಿನ ದಾಳಿಗಳನ್ನು ನೋಡಬಹುದು. ಹೀಗಿರುವಾಗ ಪ್ರಭುತ್ವ ಕಲ್ಪಿತ ಶತ್ರುಗಳ ಸ್ವಾತಂತ್ರ್ಯವನ್ನು ಇಂಚಿಂಚು ಕಸಿಯತೊಡಗುತ್ತದೆ. ಇಂತಹ ಆಧುನಿಕ ಮನುಷ್ಯನ ಪ್ರವೃತ್ತಿಯನ್ನು ವಿವರಿಸುವ ಅಂಬೇಡ್ಕರರು, ಈ ಸಮಸ್ಯೆಯನ್ನು ‘ಎರಿಕ್ ಫ್ರಾಮ್’ ಎಂಬ ಸಾಮಾಜಿಕ ತತ್ವಜ್ಞಾನಿ ತನ್ನ ‘ಫಿಯರ್ ಆಫ್ ಫ್ರೀಡಮ್’ ಅಥವಾ ‘ಎಸ್ಕೇಪ್ ಪ್ರಂ ಫ್ರೀಡಮ್’ ಎಂಬ ಗ್ರಂಥದಲ್ಲಿ ತುಂಬಾ ಸೂಕ್ಷ್ಮವಾಗಿ ವಿವರಿಸಿದ್ದನ್ನು ಉಲ್ಲೇಖಿಸುತ್ತಾರೆ.
ಹಿಟ್ಲರನು ತನ್ನ ‘ಮೇನ್ ಕೆಂಫ್’ ಕೃತಿಯಲ್ಲಿ ಬ್ರಿಟಿಷರು ಭಾರತೀಯರಿಗೆ ಶಿಕ್ಷಣವನ್ನೂ, ರಾಜಕೀಯ ಸ್ವಾತಂತ್ರವನ್ನು ಕೊಟ್ಟ ಬಗ್ಗೆ ತೀವ್ರವಾಗಿ ಖಂಡಿಸುವ ಬಗ್ಗೆ ಉಲ್ಲೇಖಿಸಿ, ‘ಇದು ನಾಝಿ ತತ್ವವು ಭಾರತೀಯರ ಸ್ವಾತಂತ್ರಕ್ಕೆ ಒಡ್ಡಿದ ನೇರ ಗಂಡಾಂತರವಾಗಿದೆ’ ಎನ್ನುತ್ತಾರೆ. ಹೆಸರಿಗೆ ಮಾತ್ರವಲ್ಲದ, ಪ್ರಜೆಗಳಲ್ಲಿ ನಿಜವಾದ ಅಧಿಕಾರ ನೆಲೆಗೊಂಡ ಸರಕಾರ, ಅಸಮಾನತೆ ಹುಟ್ಟಿಸುವ ಎಲ್ಲವನ್ನು ಕಿತ್ತೊಗೆವ ಸಮಾನತೆ, ಭೂಮಿಯ ಮೇಲೆ ಶಾಂತಿ ನೆಲೆಸಿ, ಮಾನವ ವರ್ಗದ ಎಲ್ಲದರ ಬಗೆಗೆ ಸದ್ಭಾವ ಮೂಡಿಸುವ ಜಾಗತಿಕ ಸೋದರತ್ವ ನೆಲೆಗೊಳಿಸಲು ಕಾರ್ಮಿಕ ವರ್ಗ ಯುದ್ಧಕ್ಕೂ ಸಜ್ಜಾಗಿದೆ. ವೈರಿ ಆಕ್ರಮಿಸಿದಾಗಿನ ಯುದ್ಧನಿರಾಕರಣೆ ಯುದ್ಧಗಳನ್ನು ನಾಶಮಾಡುವುದಿಲ್ಲ. ಹಿಂಸಾ ಶಕ್ತಿಗಳಿಗೆ ಶರಣಾಗತರಾಗಿ ಗಳಿಸುವ ಶಾಂತಿಯು ಶಾಂತಿಯೇ ಅಲ್ಲ. ಅದು ಆತ್ಮಹತ್ಯೆ. ಮನುಷ್ಯ ಘನತೆಯ ಬದುಕನ್ನು ನಾಶ ಮಾಡುವ ಕ್ರೌರ್ಯ ಮತ್ತು ಅನಾಗರಿಕತೆಯ ಸರ್ವಾಧಿಕಾರ ಮತ್ತು ಫ್ಯಾಶಿಸಂ ವಿರುದ್ಧ ನಾಗರಿಕ ಯುದ್ಧವೂ ಅನಿವಾರ್ಯವಾಗಬಹುದು. (8-29-37) ಅದು ತಪ್ಪಲ್ಲ ಎನ್ನುವ ಅರ್ಥದಲ್ಲಿ ಬಾಬಾ ಸಾಹೇಬರು ದೃಢ ಸಂಕಲ್ಪದ ಮಾತುಗಳನ್ನು ಆಡುತ್ತಾರೆ.
ಎರಡನೇ ಮಹಾಯುದ್ಧದ ನಂತರ ಪ್ಯಾಶಿಸ್ಟ್ ಆಡಳಿತಗಳು ಕೊನೆಗೊಂಡರೂ, ‘ಪ್ಯಾಸಿಸ್ಟ್’ ಮನೋಧರ್ಮ ನಾಶಹೊಂದಲಿಲ್ಲ. ಹಾಗಾಗಿ ಬಾಬಾ ಸಾಹೇಬರು ಹೇಳುವಂತೆ ಸರ್ವಾಧಿಕಾರ ಮತ್ತು ಫ್ಯಾಶಿಸಂನ್ನು ಮೀರುವ ಏಕೈಕ ದಾರಿಯೆಂದರೆ, ಜನ ಸಾಮಾನ್ಯರು ಅಸಹಾಯಕರಾಗದಂತೆ ಅವರಲ್ಲಿ ದೃಢವಾದ ಆತ್ಮವಿಶ್ವಾಸವನ್ನು ತುಂಬುವುದು. ಆರ್ಥಿಕ, ಸಾಮಾಜಿಕ ದುಸ್ಥಿತಿಯನ್ನು ಎದುರಿಸಲು ನೆರವಾಗುವಂತೆ ಅವರದೇ ಸಮುದಾಯಗಳಲ್ಲಿ ಸಂಘಟನೆಗಳನ್ನು ಬಲಗೊಳಿಸಬೇಕು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯು ಆಂತರಿಕವಾಗಿ ಜನಸಮುದಾಯಗಳಲ್ಲಿ ಎಷ್ಟರಮಟ್ಟಿಗೆ ಇಂತಹ ಸಂಘಟನೆಗಳನ್ನು ಕಟ್ಟುವುದೋ ಅಷ್ಟರ ಮಟ್ಟಿಗೆ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಲು ಸಾಧ್ಯ ಎನ್ನುವ ಪರ್ಯಾಯವನ್ನು ಅಂಬೇಡ್ಕರ್ ಸೂಚಿಸುತ್ತಾರೆ.
ಸಂಸದೀಯ ಪ್ರಜಾಪ್ರಭುತ್ವವೂ ಬಹುಮತದ ಬಲದಲ್ಲಿ ಸರ್ವಾಧಿಕಾರಿಯಾಗುವ ಅಪಾಯದ ಬಗ್ಗೆ ಬಾಬಾ ಸಾಹೇಬರು ಎಚ್ಚರಿಸಿದ್ದರು. ಅದೀಗ ಈ ದೇಶದಲ್ಲಿಯೇ ನಿಜವಾಗುತ್ತಿದೆ. ಹಾಗಾಗಿಯೇ ಬಾಬಾ ಸಾಹೇಬರು ಯಾವುದೇ ದೇಶದಲ್ಲಿ ಸರ್ವಾಧಿಕಾರಿ ಮತ್ತು ಫ್ಯಾಶಿಸಂ ಲಕ್ಷಣಗಳು ಕಂಡುಬಂದರೆ, ಈ ಹುನ್ನಾರ ಅರಿತು ಜನರೇ ಪ್ರಬಲ ಪ್ರತಿಸ್ಪರ್ಧಿ ಬಂಡಾಯಗಾರರನ್ನು ಹುಟ್ಟುಹಾಕಬೇಕು, ಏಕೈಕ ಪಕ್ಷದ ವಿರುದ್ಧ ಎಲ್ಲಾ ಪಕ್ಷಗಳು ಭೇದ ಮರೆತು ಒಟ್ಟಾಗಬೇಕು, ಜನರು ಹಿಂಸೆ ಮತ್ತು ದ್ವೇಶದ ವಿರುದ್ಧದ ಒಕ್ಕೊರಲ ದನಿ ದೊಡ್ಡದಾಗಿಸಬೇಕು ಎನ್ನುವುದು ಬಾಬಾಸಾಹೇಬರ ನಿಲುವು.
ಸರ್ವಾಧಿಕಾರವಿಲ್ಲದ ಪ್ರಭುತ್ವ ಸಮಾಜವಾದದ ಸ್ಥಾಪನೆ, ಸಂಸದೀಯ ಪ್ರಜಾತಂತ್ರದೊಡನೆ ಪ್ರಭುತ್ವ ಸಮಾಜವಾದದ ಸ್ಥಾಪನೆಯ ಬಿಕ್ಕಟ್ಟಿನಿಂದ ಪಾರಾಗಲು ಇರುವುದೊಂದೇ ದಾರಿ, ಸಂಸದೀಯ ಜನತಂತ್ರವನ್ನು ಉಳಿಸಿಕೊಂಡು ಪ್ರಭುತ್ವ ಸಮಾಜವಾದವನ್ನು ಸಂವಿಧಾನದಲ್ಲೇ ಕಾನೂನಾಗಿಸುವುದು. ಆಗ ಆ ಕಾನೂನನ್ನು ತೆಗೆದುಹಾಕುವುದಾಗಲಿ, ತಿದ್ದುವುದಾಗಲಿ, ಅಮಾನತ್‌ನಲ್ಲಿಡುವುದಾಗಲಿ, ಸಂಸದೀಯ ಬಹುಮತದ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಆಗ ಮಾತ್ರವೆ ಸಮಾಜವಾದವನ್ನು ಸ್ಥಾಪಿಸಲು, ಸಂಸದೀಯ ಜನತಂತ್ರವನ್ನು ಉಳಿಸಲು, ಸರ್ವಾಧಿಕಾರವನ್ನು ತಡೆಯಲು ಸಾಧ್ಯ ಎನ್ನುತ್ತಾರೆ. ಅಂಬೇಡ್ಕರರ ಮಿತಿಗಳನ್ನು ಗುರುತಿಸುವಾಗ ‘ಅಂಬೇಡ್ಕರರಿಗೆ ಪ್ರಬಲ ಸಂಸದೀಯ ಪ್ರಜಾಪ್ರಭುತ್ವ ಸರಕಾರದ ಮೇಲೆ ಇದ್ದ ವಿಶ್ವಾಸ, ನಾಗರಿಕ ಚಳವಳಿಗಳ ಮೇಲಿರಲಿಲ್ಲ, ಅದು ಆ ಸಂದರ್ಭದ ಬಿಕ್ಕಟ್ಟೂ ಆಗಿರಬಹುದು’ ಎನ್ನುವ ಚರ್ಚೆಗಳಿವೆ. ಹಾಗಾಗಿ ಇಂದು ತಲೆಯೆತ್ತುತ್ತಿರುವ ಸರ್ವಾಧಿಕಾರ ಮತ್ತು ಫ್ಯಾಶಿಸಂ ವಿರುದ್ಧ ಪ್ರಬಲ ಸಂಸದೀಯ ಪ್ರಜಾಪ್ರಭುತ್ವದ ಜೊತೆಗೆ ದೊಡ್ಡಮಟ್ಟದ ನಾಗರಿಕ ಚಳವಳಿಗಳ ಅಗತ್ಯವೂ ಇದೆ.







