ಮಂಗಳೂರು ಜೈಲಿನಲ್ಲಿ ಕಟ್ಟುನಿಟ್ಟಾಗಿ ‘ಸಾಮಾಜಿಕ ಅಂತರ’ ಪಾಲನೆ

ಮಂಗಳೂರು, ಎ.14: ಕೊರೋನ ವೈರಸ್ ನಿಗ್ರಹದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ‘ಸಾಮಾಜಿಕ ಅಂತರ’ವನ್ನು ಪಾಲನೆ ಮಾಡಲಾಗುತ್ತಿದೆ.
ಸದ್ಯ ಮಂಗಳೂರು ಜೈಲಿನಲ್ಲಿ ನಾಲ್ವರು ಮಹಿಳೆಯರ ಸಹಿತ 314 ವಿಚಾರಣಾಧೀನ ಕೈದಿಗಳಿದ್ದಾರೆ. ಈ ಎಲ್ಲ ಕೈದಿಗಳ ಊಟ, ನಿದ್ದೆ, ಓದುವಿಕೆ ಇತ್ಯಾದಿ ಸಂದರ್ಭ ‘ಸಾಮಾಜಿಕ ಅಂತರ’ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಲ್ಲರಿಗೂ ಸರಕಾರದ ವತಿಯಿಂದಲೇ ಮಾಸ್ಕ್ ಪೂರೈಕೆ ಮಾಡಲಾಗಿದೆ. ಆಹಾರ ತಯಾರಿ, ವಿತರಣೆ ಸಂದರ್ಭ ಕೂಡ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ ಎಂದು ಜೈಲರ್ ಈರಪ್ಪ ಸದಲಾಪುರ ತಿಳಿಸಿದ್ದಾರೆ.
ಯಾವೊಬ್ಬ ಕೈದಿಯ ಸಂದರ್ಶನಕ್ಕೂ ಸದ್ಯ ಅವಕಾಶ ನೀಡಲಾಗುತ್ತಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರ ಏನೇನು ಪಾಲಿಸಲು ಸೂಚಿಸಲಾಗಿದೆಯೋ ಅದನ್ನು ನಿಯಮಿತವಾಗಿ ಮುಕ್ತವಾಗಿ ಬೆರೆಯುವ ಬದಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭದಲ್ಲೇ ಸೂಚನೆ ನೀಡಿದ್ದೆವು. ಕೈದಿಗಳು ಕೂಡ ಅದನ್ನು ಪಾಲಿಸುತ್ತಿದ್ದಾರೆ. ಕೊರೋನ ಹಿನ್ನೆಲೆಯಲ್ಲಿ ಸದ್ಯ ಮಂಗಳೂರು ಜೈಲಿನಿಂದ ಯಾರೂ ಪೆರೋಲ್ ಮೇಲೆ ಬಿಡುಗಡೆಯಾಗುವುದಿಲ್ಲ ಎಂದು ಈರಪ್ಪ ಸದಲಾಪುರ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.







