ಡಾ.ಆನಂದ್ ತೇಲ್ತುಂಬ್ಡೆ, ಗೌತಮ್ ನವ್‌ಲಖಾ ಅರ್ಜಿ ತಳ್ಳಿ ಹಾಕಿರುವ ಸುಪ್ರೀಂ ಕ್ರಮ ನಿರಾಶಾದಾಯಕ: ಪಿಎಫ್ಐ

ಹೊಸದಿಲ್ಲಿ, ಎ.14: ಸಾಮಾಜಿಕ ಹೋರಾಟಗಾರರು ಹಾಗೂ ಬರಹಗಾರರಾದ ಡಾ.ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್‌ಲಖಾರ ವಿರುದ್ಧದ ಪ್ರಕರಣಗಳು ಆಧಾರರಹಿತವಾದುದು ಮತ್ತು ರಾಜಕೀಯ ಸೇಡಿನ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮ್ಯಾನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.
ಕೊರೋನ ಅಪಾಯದ ಕಾರಣದಿಂದ ಆರು ವಾರಗಳ ವರೆಗೆ ತಾತ್ಕಾಲಿಕ ಬಿಡುಗಡೆಗಾಗಿ ಕೋರಿ ಡಾ. ತೇಲ್ತುಂಬ್ಡೆ ಮತ್ತು ಗೌತಮ್ ನವ್‌ಲಖಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ವಾರದೊಳಗಾಗಿ ಶರಣಾಗತಿಯಾಗುವಂತೆ ಸುಪ್ರೀಂ ಕೋರ್ಟ್ ಅವರೊಂದಿಗೆ ಹೇಳಿದೆ. ಜಾಗತಿಕ ಮಹಾಮಾರಿಯಿಂದ ಉದ್ಭವಿಸಿರುವ ಬೆದರಿಕೆಯ ಕಾರಣದಿಂದಾಗಿ ಹಲವಾರು ರಾಷ್ಟ್ರಗಳು ತಮ್ಮ ಜೈಲುಗಳನ್ನು ಖಾಲಿಗೊಳಿಸಲು ಅಲೋಚಿಸುತ್ತಿರುವಾಗ, 65ಕ್ಕೂ ಮೇಲ್ಪಟ್ಟ ಪ್ರಾಯದ ಈ ನಾಗರಿಕರ ಆರೋಗ್ಯದ ಕುರಿತಂತೆ ಉಪೇಕ್ಷೆಯನ್ನು ಪ್ರದರ್ಶಿಸಿದೆ. ದೇಶದಲ್ಲಿನ ಜೈಲುಗಳು ಈಗಾಗಲೇ ಖೈದಿಗಳಿಂದ ತುಂಬಿ ತುಳುಕುತ್ತಿರುವಾಗ ಜಾಗತಿಕ ವಾಸ್ತವಗಳ ಕುರಿತು ಕೋರ್ಟ್ ಕುರುಡಾಗಿರುವುದು ಆಘಾತಕಾರಿ ಮತ್ತು ನಿರಾಶಾದಾಯಕವಾಗಿದೆ. ನಮ್ಮ ಸಂವಿಧಾನದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಾದ ಎಪ್ರಿಲ್ 14ರಂದು ಅವರ ಬಂಧನ ನಡೆದಿದೆ ಎಂದು ಹೇಳಲಾಗಿದ್ದು, ಇದು ದೇಶದ ಮುಂದೆ ಗುರುತರವಾದ ಪ್ರಶ್ನೆಗಳನ್ನು ಎತ್ತಿದೆ. ಅವರ ವಿರುದ್ಧದ ಪ್ರಕರಣಗಳಿಗೆ ಸಾಕ್ಷ್ಯಾಧಾರಗಳಿಲ್ಲ ಮತ್ತು ಅದು ರಾಜಕೀಯ ಸೇಡಿನ ಭಾಗವಾಗಿದೆ. ಅಸಮ್ಮತಿಯನ್ನು ಮೌನಗೊಳಿಸುವ ಪ್ರಕ್ರಿಯೆಯು 2014ರಿಂದ ಮೋದಿ ಸರಕಾರದ ಮೂಲಕ ಪ್ರಾರಂಭವಾಗಿದೆ ಎಂದವರು ಹೇಳಿದ್ದಾರೆ.
ಈ ಕುಟಿಲ ನಡೆಗಳು ಕೋವಿಡ್ 19ನಿಂದ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯದ ಬೆದರಿಕೆಯನ್ನು ತಡೆಯಲು ಆದ್ಯತೆ ನೀಡುವ ಬದಲಾಗಿ, ಕೇಂದ್ರ ಸರಕಾರವು ಲಾಕ್‌ಡೌನ್ ಅನ್ನು ತನ್ನ ಕ್ರೂರ ನಿರಂಕುಶಾಧಿಕಾರಿ ನಡೆಯನ್ನು ತೀವ್ರಗೊಳಿಸಲು ಅನುಕೂಲಕರವಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಿದೆ. ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್‌ಲಖಾರ ಬಂಧನ ಕ್ರಮವನ್ನು ತಡೆಹಿಡಿಯಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ. ಜೈಲುಗಳಲ್ಲಿ ಕೊರೋನ ವೈರಸ್‌ನ ಅಪಾಯವನ್ನು ತಪ್ಪಿಸಲು ಎಲ್ಲಾ ರಾಜಕೀಯ ಖೈದಿಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದೂ ನಾವು ಒತ್ತಾಯಿಸುತ್ತಿದ್ದೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







