ಸಜಿಪ ಮೂಡ, ಸಜಿಪ ಮುನ್ನೂರು ಗ್ರಾಮದಲ್ಲಿ ಎಸ್.ಡಿ.ಪಿ.ಐ.ಯಿಂದ ರಾಸಾಯನಿಕ ಸಿಂಪಡಣೆ

ಬಂಟ್ವಾಳ, ಎ.14: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಿನ ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಎಸ್.ಡಿ.ಪಿ.ಐ. ವತಿಯಿಂದ ರಾಸಾಯನಿಕ ಸಿಂಪಡಿಸುವ ಕಾರ್ಯ ಮಂಗಳವಾರ ನಡೆಯಿತು.
ಗ್ರಾಮದ ಇಂದಿರಾ ನಗರ, ಮಂಜಲ್ಪಾದೆ, ಶಾರದಾ ನಗರ, ಮುನ್ನೂರು, ಕೊಪ್ಪಳ ಸಹಿತ ಪ್ರಮುಖ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಿಸಲಾಯಿತು.
ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಯೂಸಫ್ ಆಲಡ್ಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರೋನ ವೈರಸ್ ಸೋಂಕು ಪ್ರಕರಣ ದೇಶದಲ್ಲಿ ಹೆಚ್ಚಿತ್ತಿರುವುದು ಆತಂಕಕಾರಿಯಾಗಿದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸರಕಾರ ಘೋಷಿಸಿರುವ ಲಾಕ್ ಡೌನ್ ಸಹಿತ ಎಲ್ಲಾ ನಿಯಮಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಎಲ್ಲಾ ವರ್ಗದ ಜನರಿಗೆ ಪಕ್ಷದ ವತಿಯಿಂದ ಒಂದು ಸುತ್ತಿನ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಗಿದೆ. ವೈರಸ್ ಹರಡದಂತೆ ಇದೀಗ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಸ್ಮಾಯೀಲ್ ಭಾವ, ಮಲಿಕ್ ಕೊಳಕೆ, ಸಲೀಂ ಆಲಂಪಾಡಿ, ಖಾದರ್ ಆಲಂಲಾಡಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.









