ಪ್ರಧಾನಿ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಕರೆ

ಬೆಂಗಳೂರು, ಎ.14: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 3ರ ವರೆಗೆ ಲಾಕ್ ಡೌನನ್ನು ವಿಸ್ತರಿಸಿರುವುದನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಭಾರತ ಸರ್ಕಾರ ನಾಳೆ ಹೊರಡಿಸಲಿರುವ ಮಾರ್ಗಸೂಚಿಗಳ ಅನುಸಾರ ನಮ್ಮ ಸರ್ಕಾರ ಲಾಕ್ ಡೌನನ್ನು ಸಮರ್ಪಕವಾಗಿ ಪಾಲನೆ ಮಾಡಲಿದೆ. ಎಪ್ರಿಲ್ 20ರ ವರೆಗೆ ಪ್ರಧಾನಿ ಸೂಚಿಸಿದಂತೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲಿಸಲಾಗುವುದು ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ಪ್ರಧಾನಿ ನೀಡಿದ ಏಳು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕರ್ನಾಟಕದ ಜನತೆಗೆ ನಾನು ಮನವಿ ಮಾಡುತ್ತೇನೆ. ಸ್ವಯಂ ಪ್ರೇರಿತರಾಗಿ ಈ ಕ್ರಮಗಳಿಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಹೇಳಿದಂತೆ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೂ ಆರೋಗ್ಯ ಸೌಲಭ್ಯಗಳನ್ನು ಕಳೆದ ಎರಡು ತಿಂಗಳಲ್ಲಿ ಹೆಚ್ಚಿಸಲಾಗಿದೆ.
ಮನೆಯ ಹಿರಿಯರ ವಿಶೇಷ ಕಾಳಜಿ ವಹಿಸಿ. ಯಾವುದೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಹೆಚ್ಚು ಜೋಪಾನ ಮಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಮಾಡಿದ ಮಾಸ್ಕ್ ಬಳಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆಯ ಸಲಹೆಗಳನ್ನು ಪಾಲಿಸಿ. ಬಿಸಿನೀರು, ಕಷಾಯ ಕುಡಿಯಿರಿ. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಬಡ ಕುಟುಂಬಗಳಿಗೆ ನೆರವಾಗಿ. ನಿಮ್ಮ ಕೃಷಿ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಗೆ, ನೌಕರರಿಗೆ ನೆರವಾಗಿ. ನೌಕರಿಯಿಂದ ತೆಗೆಯಬೇಡಿ. ಪೊಲೀಸ್,, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರನ್ನು ಗೌರವಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ, ಅಗತ್ಯ ವಸ್ತುಗಳ ಪೂರೈಕೆಗೆ, ಔಷಧಿ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗುವುದು. ವಿಶೇಷವಾಗಿ ವಲಸೆ ಕಾರ್ಮಿಕರು ಎಲ್ಲಿದ್ದೀರೋ ಅಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿ ಮಾಡುತ್ತೇನೆ. 3ನೇ ಮೇ ವರೆಗೆ ಲಾಕ್ ಡೌನ್ ನಿಯಮ ಪಾಲಿಸಿ. ಎಲ್ಲಿದ್ದೀರೋ ಅಲ್ಲೇ ಸುರಕ್ಷಿತವಾಗಿರಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.







