ಅಡ್ಡೂರು: ಮದ್ರಸ ಕೊಠಡಿಯಲ್ಲಿ ವೈದ್ಯ ದಂಪತಿಯಿಂದ ಆದರ್ಶ ಸೇವೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಉಚಿತ ಚಿಕಿತ್ಸೆ

ಮಂಗಳೂರು, ಎ.14: ಲಾಕ್‌ಡೌನ್‌ನಿಂದ ಗ್ರಾಮೀಣ ಪ್ರದೇಶಗಳ ಬಹುತೇಕ ವೈದ್ಯರ ಕ್ಲಿನಿಕ್‌ಗಳು ಬಂದ್ ಆಗಿರುವ ಕಾರಣ ಸಾಮಾನ್ಯ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಪಡೆಯಲು ಜನಸಾಮಾನ್ಯರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಗುರುಪುರ ಸಮೀಪದ ಅಡ್ಡೂರು ಗ್ರಾಮದ ನಿವಾಸಿಗರಿಗೆ ಸ್ಥಳೀಯ ವೈದ್ಯ ದಂಪತಿ ಡಾ.ಸಬೀನಾ ಮತ್ತು ಡಾ.ಮುಹಮ್ಮದ್ ಸಾಲಿ ಸೇವೆಯು ಆದರ್ಶವಾಗಿದೆ.
ಅಡ್ಡೂರಿನ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯು ಮದ್ರಸದ ಒಂದು ಕೊಠಡಿಯಲ್ಲಿ ಸ್ಥಳೀಯರ ಸಾಮಾನ್ಯ ರೋಗ-ರುಜಿನಕ್ಕೆ ಅನುಕೂಲವಾಗುವಂತೆ ಸೋಮವಾರದಿಂದ ಉಚಿತ ವೈದ್ಯಕೀಯ ಸೇವೆ ಆರಂಭಿಸಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಡಾ. ಸಬೀನಾ ಲಭ್ಯವಿದ್ದು, ಎಲ್ಲ ವರ್ಗದವರಿಗೆ ವೈದ್ಯಕೀಯ ತಪಾಸಣೆಯೊಂದಿಗೆ ಉಚಿತ ಔಷಧಿ ನೀಡುತ್ತಿದ್ದಾರೆ. ವೈದ್ಯರ ಈ ಉಚಿತ ಸೇವೆಗೆ ಪೂರಕವಾಗಿ ನಗರದ ಕಂಕನಾಡಿಯ ‘ಐ ಡೆಕೋರ್’ನ ಸಾಹಿಕ್ ಬಶೀರ್ ಅಡ್ಡೂರು ಔಷಧದ ಪ್ರಾಯೋಜಕತ್ವ ವಹಿಸಿದ್ದಾರೆ.
ಉಚಿತ ಸೇವೆ ಆರಂಭವಾದ 2ನೇ ದಿನಕ್ಕೆ ಡಾ. ಸಬೀನಾ ಕ್ಲಿನಿಕ್‌ನಲ್ಲಿ ಜಾತಿ-ಧರ್ಮ ಭೇದವಿಲ್ಲದೆ ಸುಮಾರು 20ಕ್ಕೂ ಅಧಿಕ ರೋಗಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಕಾಯುತ್ತಿದ್ದಾರೆ. ಈ ವೈದ್ಯರು ಊರಿನ ಪಾಲಿಗೆ ಆಪದ್ಬಾಂಧವರಂತೆ ಬಂದಿದ್ದಾರೆ’ ಎಂದು ಸ್ಥಳೀಯರಾದ ಅಬೂಬಕರ್ ತಿಳಿಸಿದ್ದಾರೆ.
*ವೈದ್ಯ ದಂಪತಿಯ ಬಗ್ಗೆ
ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬಿಎ, ಎಂಎಸ್ ವ್ಯಾಸಂಗ ಮಾಡಿರುವ ಡಾ.ಸಬೀನಾ ನಗರದ ಕಂಕನಾಡಿಯ ಎಂಐಎನ್‌ಎಸ್‌ಎಯಲ್ಲಿ ಆರು ವರ್ಷ ಹಾಗೂ ಯೆನೆಪೊಯ ಆಸ್ಪತ್ರೆಯಲ್ಲಿ ಆರು ತಿಂಗಳು ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ಆರು ವರ್ಷಗಳ ಹಿಂದೆ ಫರಂಗಿಪೇಟೆಯ ಡಾ.ಮುಹಮ್ಮದ್ ಸಾಲಿಯೊಂದಿಗೆ (ಬಿಪಿಟಿ, ಎಂಡಿ) ವಿವಾಹವಾದ ಇವರು ದುಬೈಗೆ ತೆರಳಿದ್ದರು.
ಡಾ. ಮುಹಮ್ಮದ್ ಸಾಲಿ ದುಬೈಯ ಗಲಿನಸ್ ರೀಹೆಬಿಲಿಟೇಶನ್ ಸೆಂಟರ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಸಹಿತ ಊರಿಗೆ ಆಗಮಿಸಿದ್ದ ಈ ವೈದ್ಯ ದಂಪತಿ ಸದ್ಯ ಲಾಕ್‌ಡೌನ್‌ನಿಂದ ಇಲ್ಲೇ ಉಳಿದುಕೊಂಡಿದ್ದಾರೆ.
‘ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸ್ವಇಚ್ಛೆಯಿಂದ ಜನಸೇವೆಗೈಯಲು ನಮಗೆ ನಿಜಕ್ಕೂ ಸಂತೋಷವಾಗುತ್ತಿದೆ. ಸೋಮವಾರ ಸುಮಾರು 40 ಮಂದಿ ಚಿಕಿತ್ಸೆಗಾಗಿ ಬಂದಿದ್ದರು. ಇಲ್ಲೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತಾ ಎಚ್ಚರವಹಿಸಲಾಗುತ್ತಿದೆ ಎಂದು ಡಾ. ಸಬೀನಾ ತಿಳಿಸಿದ್ದಾರೆ.







