ಮೇ 3 ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಏಕೆ ವಿಸ್ತರಿಸಲಾಯಿತು?

ಹೊಸದಿಲ್ಲಿ, ಎ.14: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ನ್ನು ಮೇ 3 ರವರೆಗೆ ವಿಸ್ತರಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಮಂಗಳವಾರ ಕೊನೆಗೊಳ್ಳಬೇಕಿದ್ದ 21 ದಿನಗಳ ಲಾಕ್‌ಡೌನ್ ವಿಸ್ತರಿಸಲು ಹಲವು ರಾಜ್ಯಗಳು ಮಾಡಿರುವ ಮನವಿಯನ್ನು ಉಲ್ಲೇಖಿಸಿದರು.
ಮಹಾರಾಷ್ಟ್ರ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್ ಅನ್ನು ಎಪ್ರಿಲ್ 30 ರವರೆಗೆ ವಿಸ್ತರಿಸಿದ್ದವು.
ಪ್ರಧಾನಮಂತ್ರಿಯವರ ಘೋಷಣೆಯನ್ನು ವ್ಯಾಪಕವಾಗಿ ನಿರೀಕ್ಷಿಸಲಾಗಿದ್ದರೂ, ಎಪ್ರಿಲ್ 30 ರ ಬದಲು ಮೇ 3 ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಲು ಸರಕಾರ ಯಾಕೆ ನಿರ್ಧರಿಸಿತು ಎನ್ನುವ ವಿಚಾರದ ಬಗ್ಗೆ ಹಲವರಿಗೆ ಅಚ್ಚರಿ ಉಂಟಾಗಿತ್ತು. ಮೇ 1 ಶುಕ್ರವಾರ ಕಾರ್ಮಿಕ ದಿನ. ಅಂದು ಸಾರ್ವತ್ರಿಕ ರಜಾದಿನ. ಮೇ 2 ಶನಿವಾರ ವಾರಾಂತ್ಯ ಮತ್ತು ಮೇ3 ರವಿವಾರ ರಜಾದಿನ. ಈ ಕಾರಣದಿಂದಾಗಿ ಲಾಕ್‌ಡೌನ್ ನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 25 ರಿಂದ ಜಾರಿಗೆ ಬಂದ ಲಾಕ್‌ಡೌನ್ ಎಪ್ರಿಲ್ 14 ರ ಮಧ್ಯರಾತ್ರಿ ಮುಕ್ತಾಯಗೊಳ್ಳಬೇಕಿತ್ತು.







