ಭಟ್ಕಳದ ಐವರು ಕೊರೋನ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಸಾಂದರ್ಭಿಕ ಚಿತ್ರ
ಕಾರವಾರ, ಎ.14: ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತರ ಪೈಕಿ ಐದು ಮಂದಿ ಗುಣಮುಖರಾಗಿದ್ದು, ಮಂಗಳವಾರ ಬಿಡುಗಡೆ ಮಾಡಲಾಗಿದೆ. ಅವರನ್ನು ಭಟ್ಕಳದ ಕ್ವಾರಂಟೈನ್ ಕೇಂದ್ರದಲ್ಲಿಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ ತಿಳಿಸಿದ್ದಾರೆ.
ಭಟ್ಕಳದ ಕೊರೋನ ಸೋಂಕಿತರು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರಿಂದ ಶೀಘ್ರವೇ ಗುಣಮುಖರಾಗಿದ್ದಾರೆ. ಸರಕಾರದ ಶಿಷ್ಟಾಚಾರದಂತೆ ಬಿಡುಗಡೆ ಹೊಂದಿದವರನ್ನು ಕೆಲವು ದಿನಗಳ ಕಾಲ ಪ್ರತ್ಯೇಕವಾಗಿಡಲಾಗುವುದು ಎಂದು ತಿಳಿಸಿದರು.
ವಿದೇಶದಿಂದ ಮರಳಿದ ಹಾಗೂ ಅವರ ಸಂಪರ್ಕದಲ್ಲಿದ್ದ ಒಟ್ಟು 9 ಜನರು ಕೊರೋನ ಸೋಂಕಿತರಾಗಿದ್ದರು. ಎಲ್ಲರೂ ಭಟ್ಕಳದವರೇ ಆಗಿದ್ದು ಅವರನ್ನು ಕಾರವಾರದ ನೌಕಾನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸೋಂಕಿತ 9 ಜನರ ಪೈಕಿ ಇಬ್ಬರು ಈ ಹಿಂದೆಯೇ ಗುಣಮುಖರಾಗಿದ್ದರು. ಈಗ ಮತ್ತೇ ಐವರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತ ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದರಿಂದ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಅವರು ಸಹ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.







