ಕೊರೋನ ನಿರ್ವಹಣೆ: ಕೇಂದ್ರಕ್ಕೆ ಆಕ್ಸ್ ಫರ್ಡ್ ನಿಂದ ಫುಲ್ ಮಾರ್ಕ್ಸ್ ಎಂದ ಬಿಜೆಪಿ, ಹಾಗೆ ಹೇಳೇ ಇಲ್ಲ ಎಂದ ವಿವಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಭಾರತ ಫುಲ್ ಮಾರ್ಕ್ಸ್ ಪಡೆದಿದೆ ಎಂದು ಆಕ್ಸ್ ಫರ್ಡ್ ವಿವಿಯ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನ್ಮೆಂಟ್ ಹೇಳಿದೆ ಎಂದು ಬಿಜೆಪಿ ಇತ್ತೀಚೆಗೆ ಹೇಳಿಕೊಂಡಿತ್ತು. ವಿವಿಧ ಸರಕಾರಗಳು ಕೊರೋನ ಹಾವಳಿಗೆ ಹೇಗೆ ಪ್ರತಿಕ್ರಿಯಿಸಿವೆಯೆಂಬ ಕುರಿತು ಬ್ರಿಟಿಷ್ ಶಿಕ್ಷಣ ಸಂಸ್ಥೆ ನೀಡಿದ್ದ ಗ್ರಾಫ್ ಅನ್ನು ಎಪ್ರಿಲ್ 10ರಂದು ಬಿಜೆಪಿ ಟ್ವೀಟ್ ಮಾಡಿತ್ತು.
ಭಾರತದ ಮೋದಿ ಸರಕಾರ ಪರಿಣಾಮಕಾರಿ ಹಾಗೂ ಕ್ಷಿಪ್ರವಾಗಿ ಜಾರಿಗೊಳಿಸಿದ ಕ್ರಮವನ್ನು ಈ ಫುಲ್ ಮಾರ್ಕ್ಸ್ ದೃಢೀಕರಿಸುತ್ತದೆ ಎಂದೂ ಬಿಜೆಪಿ ಹೇಳಿಕೊಂಡಿತ್ತು.
ಬಿಜೆಪಿಯ ಟ್ವೀಟ್ ಗೆ ಇಂದು ಪ್ರತಿಕ್ರಿಯಿಸಿರುವ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನ್ಮೆಂಟ್ ತಾನು ನೀಡಿದ ಸ್ಕೋರ್ ಸರಕಾರದ ನೀತಿಗಳನ್ನು ಎಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂಬುದಕ್ಕಾಗಿಯೇ ಹೊರತು ಒಂದು ಸರಕಾರದ ಪ್ರತಿಕ್ರಿಯೆ ಪರಿಣಾಮಕಾರಿ ಅಥವಾ ಸೂಕ್ತವಾದುದೇ ಎಂಬುದ್ದಕ್ಕಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನ್ಮೆಂಟ್ ಮಾರ್ಚ್ 25ರಂದು ಕೋವಿಡ್-19 ಗವರ್ನ್ಮೆಂಟ್ ರೆಸ್ಪಾನ್ಸ್ ಟ್ರ್ಯಾಕರ್ ಹೊರತಂದಿತ್ತು. ಜಗತ್ತಿನ ವಿವಿಧ ದೇಶಗಳು ಕೋವಿಡ್ ವಿರುದ್ಧ ಕೈಗೊಂಡ ಕ್ರಮಗಳು ಎಷ್ಟು ಕಠಿಣವಾಗಿವೆ ಎಂಬ ಆಧಾರದಲ್ಲಿ ಸ್ಕೋರ್ ನೀಡಲಾಗಿತ್ತು.
Thanks for your interest in our tracker, which simply records the number and strictness of government policies. The related stringency index should not be interpreted as measuring the appropriateness or effectiveness of a country’s response - there are no 'marks' as such.
— Blavatnik School of Government (@BlavatnikSchool) April 12, 2020