ಉಡುಪಿ: ಕೊರೋನ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ

ಸಾಂದರ್ಭಿಕ ಚಿತ್ರ
ಉಡುಪಿ, ಎ.14: ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕು (ಕೋವಿಡ್-19) ಪತ್ತೆಯಾದ ಎರಡನೇ ವ್ಯಕ್ತಿ ಕಾಪು ತಾಲೂಕು ಮಣಿಪುರದ 35ರ ಹರೆಯದ ವ್ಯಕ್ತಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಇಂದು ಅಪರಾಹ್ನ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕಳೆದ ಮಾ.29ರಂದು ಇವರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಆ ಬಳಿಕ ಮೊದಲು ಮಣಿಪಾಲದ ಕೆಎಂಸಿ ಆಸ್ಪತ್ರೆ ಹಾಗೂ ಬಳಿಕ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಕೆಯ ಬಳಿಕ 24 ಗಂಟೆಗಳ ಅಂತರದಲ್ಲಿ ಅವರ ಗಂಟಲಿನ ದ್ರವದ ಎರಡು ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಎರಡೂ ನೆಗೆಟಿವ್ ಆಗಿ ಬಂದ ಕಾರಣ ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾ ಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ. ಅವರನ್ನು ಮುಂದಿನ 14 ದಿನಗಳ ಕಾಲ ಕಡ್ಡಾಯ ಹೋಮ್ ಕ್ವಾರಂಟೈನ್ನ ಸಲಹೆ ನೀಡಲಾಗಿದೆ ಎಂದೂ ಡಾ. ಸೂಡ ಹೇಳಿದರು.
35ರ ಹರೆಯದ ಈ ಯುವಕ ಮಾ.17ರಂದು ದುಬಾಯಿಯಿಂದ ಊರಿಗೆ ಆಗಮಿಸಿದ್ದರು. ಜ್ವರದ ಕಾರಣ ಮಾ.27ರಂದು ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಇವರ ಗಂಟಲು ದ್ರವದ ಮಾದರಿಯಲ್ಲಿ ಮಾ.29ರಂದು ಸೋಂಕು ಪತ್ತೆಯಾಗಿತ್ತು. ಬಳಿಕ ಅವರಿಗೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ಶನಿವಾರ ಕಳುಹಿಸಿದ ಮೊದಲ ಸ್ಯಾಂಪಲ್ ಮಾದರಿ ಸೋಮವಾರ ನೆಗೆಟಿವ್ ಆಗಿ ಬಂದಿದ್ದರೆ, ನಿನ್ನೆ ಕಳುಹಿಸಿದ ಎರಡನೇ ಮಾದರಿಯ ಫಲಿತಾಂಶ ಇಂದು ನೆಗೆಟಿವ್ ಆಗಿ ಬಂದಿದೆ ಎಂದು ಡಿಎಚ್ಓ ವಿವರಿಸಿದರು.
ದುಬೈಯಿಂದ ಊರಿಗೆ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗುವವರೆಗೆ ಅವರ ಸಂಪರ್ಕಕ್ಕೆ ಬಂದ 200ಕ್ಕೂ ಅಧಿಕ ಮಂದಿಯನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸಿದ್ದು, ಎಲ್ಲರ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದೂ ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಮೂವರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ಮಣಿಪಾಲದ ಯುವಕ ಸಂಪೂರ್ಣ ಗುಣಮುಖರಾಗಿ ಕಳೆದ ಶನಿವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಇದೀಗ ಎರಡನೇ ರೋಗಿ ಸಹ ಬಿಡುಗಡೆಗೊಂಡಿದ್ದು, ಉಡುಪಿ ಆಸುಪಾಸಿನ 29ರ ಹರೆಯದ ಇನ್ನೊಬ್ಬ ಯುವಕ ಮಾತ್ರ ಚಿಕಿತ್ಸೆಯಲ್ಲಿದ್ದಾರೆ. ಈತನ ಮೊದಲ ಸ್ಯಾಂಪಲ್ನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.







