ಮುಂಬೈ: ಬಾಂದ್ರಾದಲ್ಲಿ ಜಮಾಯಿಸಿದ ವಲಸೆ ಕಾರ್ಮಿಕರು; ಪೊಲೀಸರಿಂದ ಲಾಠಿ ಪ್ರಹಾರ

ಮುಂಬೈ, ಎ.14: ಲಾಕ್‌ಡೌನ್ ವಿಸ್ತರಣೆಯಿಂದ ತೊಂದರೆಗೊಳಗಾದ ಸಹಸ್ರಾರು ಮಂದಿ ವಲಸೆ ಕಾರ್ಮಿಕರು ಮಂಗಳವಾರ ಮುಂಬೈನ ಬಾಂದ್ರಾ ನಿಲ್ದಾಣದ ಹೊರಗೆ ಜಮಾಯಿಸಿದರು. ಅವರನ್ನು ಚದುರಿಸಲು ಪೊಲೀಸರು ಅಂತಿಮವಾಗಿ ಲಾಠಿ ಪ್ರಹಾರ ನಡೆಸಿದರು.
ದೇಶದಲ್ಲಿ ಅತಿ ಹೆಚ್ಚು ಕೊರೋನ ವೈರಸ್ ಸೋಂಕಿತ ಪ್ರಕರಣಗಳನ್ನು ಹೊಂದಿರುವ ಮುಂಬೈ ನಗರ ಇಂದು ಮಧ್ಯಾಹ್ನ ವಲಸೆ ಕಾರ್ಮಿಕರ ಪ್ರತಿಭಟನೆಯ ತಾಣವಾಯಿತು. ಲಾಕ್ ಡೌನ್ ಕೊನೆಗೊಳ್ಳುವ ಮತ್ತು ತಮ್ಮ ಊರಿಗೆ ವಾಪಸಾಗುವ ನಿರೀಕ್ಷೆಯೊಂದಿಗೆ ವಲಸೆ ಕಾರ್ಮಿಕರು ಅಲ್ಲಿಗೆ ಬಂದಿದ್ದರು.
ಕೊರೋನ ವೈರಸ್ ಸೋಂಕು ಹರಡುತ್ತಿರುವ ಮತ್ತು ಸಾಮಾಜಿಕ ಅಂತರದ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರೂ ಅವರ ಮಾತಿಗೆ ಕಿವಿಗೊಡಲಿಲ್ಲ. ಪೊಲೀಸರು ಅವರನ್ನು ಚದುರಿಸಲು ಅಂತಿಮವಾಗಿ ಲಾಠಿ ಬಳಸಬೇಕಾಯಿತು.
ದೇಶಾದ್ಯಂತ ಲಾಕ್ ಡೌನ್ ನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ . ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಈ ಘೋಷಣೆ ಮಾಡಿದ್ದಾರೆ.
ಮೂರು ವಾರಗಳ ಲಾಕ್‌ಡೌನ್‌ನಿಂದ ಆದಾಯವನ್ನು ಕಳೆದುಕೊಂಡ ವಲಸೆ ಕಾರ್ಮಿಕರು, ತೊಂದರೆಗೊಳಗಾಗಿದ್ದಾರೆ. ಯಾವುದೇ ರೀತಿಯ ಸಾರಿಗೆ ಸಂಪರ್ಕದ ಕೊರತೆಯಿಂದಾಗಿ ಅವರಲ್ಲಿ ಹೆಚ್ಚಿನವರಿಗೆ ತಮ್ಮ ಊರುಗಳಿಗೆ ವಾಪಸಾಗಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ.
ಜನಸಮೂಹ ಚದುರಿದೆ: ಸರ್ಕಾರ
ಪೊಲೀಸ್ ಅಧಿಕಾರಿಯೊಬ್ಬರ ಸುಮಾರು 1,000 ರಷ್ಟುವಲಸೆ ಕಾರ್ಮಿಕರು , ರೈಲ್ವೆ ನಿಲ್ದಾಣದ ಸಮೀಪವಿರುವ ಉಪನಗರ ಬಾಂದ್ರಾ (ಪಶ್ಚಿಮ) ಬಸ್ ನಿಲ್ದಾಣದ ಬಳಿ ಜಮಾಯಿಸಿದರು.
ಹತ್ತಿರದ ಪಟೇಲ್ ನಗ್ರಿ ಪ್ರದೇಶದ ಕೊಳೆಗೇರಿಗಳಲ್ಲಿ ಬಾಡಿಗೆಗೆ ವಾಸಿಸುವ ದೈನಂದಿನ ಕೂಲಿ ಕಾರ್ಮಿಕರು ಊರುಗಳಿಗೆ ಹಿಂತಿರುಗಲು ಸಾರಿಗೆ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಅವರಲ್ಲಿ ಹೆಚ್ಚನವರು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಿಂದ ಬಂದವರು.
ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್ ಈ ಸಂಬಂಧ ಮಾತನಾಡಿ ನಗರಕ್ಕೆ ವಲಸೆ ಬಂದ ಕಾರ್ಮಿಕರಿಗೆ ಆಹಾರದ ಕೊರತೆಯಿಲ್ಲ ಎಂದು ಭರವಸೆ ನೀಡಿದರು.
"ಅವರಿಗೆ ಆಹಾರ, ಆಹಾರ ಮತ್ತು ಪಡಿತರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಈ ಹಿಂದೆ, ಗೃಹ ಸಚಿವ ಅಮಿತ್ ಶಾ ಅವರು ಲಾಕ್ ಡೌನ್ ಮುಗಿದ ನಂತರ ಅವರನ್ನು ತಮ್ಮ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು, ಆದರೆ ಈಗ ಲಾಕ್ ಡೌನ್ ವಿಸ್ತರಿಸಲಾಗಿದೆ ಆದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ "ಎಂದು ಅಸ್ಲಂ ಶೇಖ್ ಹೇಳಿದರು.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಊರುಗಳಿಗೆ ಹಿಂತಿರುಗದಂತೆ ಮನವೊಲಿಸುವಲ್ಲಿ ಸರಕಾರ ಯಶಸ್ವಿಯಾಗಿದೆ ಎಮದು ಹೇಳಿದ್ದಾರೆ
" ವಲಸೆ ಬಂದ ಜನರು ತಮ್ಮ ಊರುಗಳಿಗೆ ಮರಳಬೇಕೆಂದು ಆಶಿಸುತ್ತಿದ್ದರು. ಇನ್ನೂ ಯಾವುದೇ ರಾಜ್ಯ ಗಡಿಗಳು ತೆರೆದಿಲ್ಲವಾದ್ದರಿಂದ ಅವರು ಕಾಯಬೇಕಾಗುತ್ತದೆ ಎಂದು ನಾವು ಮನವೊಲಿಸಲು ಸಾಧ್ಯವಾಯಿತು. ಜನಸಮೂಹವನ್ನು ಚದುರಿಸಲಾಗಿದೆ" ಎಂದು ಅವರು ಹೇಳಿದರು.
"ಮುಂಬೈನ ಬಾಂದ್ರಾ ನಿಲ್ದಾಣದ ಬಳಿ ಜಮಾಯಿಸಿದ ವಲಸೆ ಕಾರ್ಮಿಕರು ರಾಜ್ಯ ಗಡಿ ತೆರೆಯಲು ಪ್ರಧಾನಿ ಮೋದಿ ಆದೇಶಿಸಿದ್ದಾರೆಂದು ಭಾವಿಸಿರಬೇಕು" ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.
ಕೇಂದ್ರವನ್ನು ದೂಷಿಸಿದ ಶಿವಸೇನೆ
ಕೇಂದ್ರ ಸರ್ಕಾರದ ಅನುಚಿತ ಯೋಜನೆಯ ಫಲವೇ ಬಾಂದ್ರಾ ನಿಲ್ದಾಣದಲ್ಲಿ ನೆರೆದಿದ್ದ ಜನ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಮತ್ತು ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಹೆಸರನ್ನು ಬಹಿರಂಗಪಡಿಸದ ಕಾರ್ಮಿಕರೊಬ್ಬರು, "ಎನ್ ಜಿಒಗಳು ಮತ್ತು ಸ್ಥಳೀಯ ನಿವಾಸಿಗಳು ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸುತ್ತಿದ್ದಾರೆ, ಆದರೆ ಲಾಕ್ ಡೌನ್ ಸಮಯದಲ್ಲಿ ಅವರು ತಮ್ಮ ಸ್ಥಳೀಯ ರಾಜ್ಯಗಳಿಗೆ ಹಿಂತಿರುಗಲು ಬಯಸುತ್ತಾರೆ, ಇದು ಅವರ ಜೀವನೋಪಾಯದ ಮೂಲವನ್ನು ಕೆಟ್ಟದಾಗಿ ಪರಿಣಾಮ ಬೀರಿದೆ" ಎಂದು ಹೇಳಿದರು.
"ಈಗ, ನಮಗೆ ಆಹಾರ ಬೇಡ, ನಾವು ನಮ್ಮ ಸ್ಥಳೀಯ ಸ್ಥಳಕ್ಕೆ ಹಿಂತಿರುಗಲು ಬಯಸುತ್ತೇವೆ, ಲಾಕ್ ಡೌನ್ ವಿಸ್ತರಣೆಯಿಂದ ನಮಗೆ ಸಂತೋಷವಾಗಿಲ್ಲ “ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಅಸದುಲ್ಲಾ ಶೇಖ್, "ನಾವು ಈಗಾಗಲೇ ನಮ್ಮ ಉಳಿತಾಯವನ್ನು ಲಾಕ್‌ಡೌನ್‌ನ ಮೊದಲ ಹಂತದಲ್ಲಿ ಖರ್ಚು ಮಾಡಿದ್ದೇವೆ. ನಮಗೆ ಈಗ ತಿನ್ನಲು ಏನೂ ಇಲ್ಲ, ನಾವು ನಮ್ಮ ಊರಿಗೆ ಹಿಂತಿರುಗಲು ಬಯಸುತ್ತೇವೆ ಎಂದರು
ಮತ್ತೊಬ್ಬ ಕಾರ್ಮಿಕ ಅಬ್ದುಲ್ ಕಯೂನ್, "ನಾನು ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿದ್ದೇನೆ ಆದರೆ ಇಂತಹ ಪರಿಸ್ಥಿತಿಯನ್ನು ನೋಡಿಲ್ಲ. ನಮ್ಮನ್ನು ಇಲ್ಲಿಂದ ನಮ್ಮ ಸ್ಥಳೀಯ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರ ರೈಲುಗಳನ್ನು ಪ್ರಾರಂಭಿಸಬೇಕು" ಎಂದು ಹೇಳಿದರು.
ಯಾವುದೇ ಅಹಿತಕರ ಘಟನೆಗಳನ್ನು ನಿಭಾಯಿಸಲು ಪ್ರತಿಭಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇತರ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.







