ಉಡುಪಿ: ಮಂಗಳವಾರ ಮತ್ತೆ 108 ಮಂದಿಯ ಮಾದರಿ ಪರೀಕ್ಷೆಗೆ

ಸಾಂದರ್ಭಿಕ ಚಿತ್ರ
ಉಡುಪಿ, ಎ.14: ಶಂಕಿತ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಮಂಗಳವಾರ ಇನ್ನೂ 108 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇವುಗಳಲ್ಲಿ 105 ಮಂದಿ ಕೋವಿಡ್ ಶಂಕಿತರ ಸಂಪರ್ಕವನ್ನು ಹೊಂದಿದ್ದರೆ, ಒಬ್ಬರು ಕೋವಿಡ್ ಶಂಕಿತರಾಗಿದ್ದರೆ, ತಲಾ ಒಬ್ಬರು ಉಸಿರಾಟದ ತೊಂದರೆ ಹಾಗೂ ಶೀತಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ನಿನ್ನೆಯವರೆಗೆ ಬಾಕಿ ಉಳಿದಿದ್ದ 56 ಮಂದಿಯಲ್ಲಿ 39 ಮಂದಿಯ ಸ್ಯಾಂಪಲ್ ವರದಿ ಇಂದು ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ. ಬಾಕಿ ಉಳಿದ 17 ಸ್ಯಾಂಪಲ್ಗಳೊಂದಿಗೆ ಇಂದು ಕಳುಹಿಸಿದ 108 ಸೇರಿ ಒಟ್ಟು 125 ಸ್ಯಾಂಪಲ್ಗಳ ವರದಿ ಇನ್ನು ಬರಬೇಕಿದೆ ಎಂದು ಡಾ.ಸೂಡ ತಿಳಿಸಿದರು.
ಮಂಗಳವಾರ ಇನ್ನೂ 17 ಮಂದಿ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಆರು ಮಂದಿ ಪುರುಷ ಹಾಗೂ ಒಬ್ಬ ಮಹಿಳೆ ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗಾಗಿ ಬಂದಿದ್ದರೆ, ಎಂಟು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಉಸಿರಾಟದ ತೊಂದರೆಗಾಗಿ ಆಗಮಿಸಿದ್ದಾರೆ. ಇದರೊಂದಿಗೆ ಒಟ್ಟು 38 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ. ಇಂದು ಎಂಟು ಈ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಈವರೆಗೆ 194 ಮಂದಿ ಬಿಡುಗಡೆಗೊಂಡಂತಾಗಿದೆ ಎಂದೂ ಡಿಎಚ್ಓ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 537 ಮಂದಿಯ ಸ್ಯಾಂಪಲ್ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಇಂದಿನವರೆಗೆ 412 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 409 ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿತ್ತು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಪ್ರಯಾಣದಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಮಂಗಳವಾರ 16 ಮಂದಿ ಹೊಸದಾಗಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2,140 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1,222 (ಇಂದು 105) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1,974 (23) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 101 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 27 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ. ಇಂದು 19ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್ಚಂದ್ರ ಸೂಡ ತಿಳಿಸಿದರು.







