ಭಾರತದ ಬಾವಲಿಗಳಲ್ಲಿ ಕೊರೋನ ವೈರಸ್ !

ಹೊಸದಿಲ್ಲಿ, ಎ,14: ಭಾರತದ ಎರಡು ಬಗೆಯ ಬಾವಲಿಗಳಲ್ಲಿ ಮಹಾಮಾರಿ ಕೊರೋನ ವೈರಸ್ ಕಂಡುಬಂದಿವೆ ಎಂದು ವರದಿಯೊಂದು ತಿಳಿಸಿದೆ.
ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಮತ್ತು ರೌಸೆಟ್ಟಸ್ ಪ್ರಭೇದಗಳ ಎರಡು ಬಾವಲಿಗಳಲ್ಲಿ ಕೊರೋನ ವೈರಸ್ ನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವೈಜ್ಞಾನಿಕ ಅಧ್ಯಯನದ ಮೂಲಕ ಪತ್ತೆ ಹಚ್ಚಿದೆ.
ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಿಂದ ಸಂಗ್ರಹಿಸಲಾದ ಈ 25 ಬಾವಲಿಗಳ ಪ್ರಭೇದಗಳ ಮಾದರಿಗಳು ರಿವರ್ಸ್-ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ ಟಿ -ಪಿಸಿಆರ್) ಪರೀಕ್ಷೆಗಳನ್ನು ನಡೆಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಈ ಸಂಶೋಧನೆಗಳು ಭಾರತದಲ್ಲಿ ಮೊದಲ ಬಾರಿಗೆ ಬಾವಲಿಗಳಲ್ಲಿ ಕೊರೋನ ವೈರಸ್ ಇರುವಿಕೆಯನ್ನು ಸಂಶೋಧಿಸಲು ನಡೆಯುತ್ತಿರುವ ದೊಡ್ಡ ಅಧ್ಯಯನದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಯ ವಿಜ್ಞಾನಿಗಳ ತಂಡದೊಂದಿಗೆ ಜಂಟಿಯಾಗಿ ನಡೆಸಿದ ಐಸಿಎಂಆರ್ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟಗೊಂಡಿದೆ, ಆದರೆ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡಿದೆಯೋ ಎಂದು ಸಾಬೀತುಪಡಿಸಲು ಇನ್ನೂ ಯಾವುದೇ ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ.
ಕೇರಳ, ಕರ್ನಾಟಕ, ತಮಿಳುನಾಡು, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಒಡಿಶಾ, ತೆಲಂಗಾಣ, ಚಂಡೀಗಢ ಮತ್ತು ಪುದುಚೇರಿ ಕಾಡುಗಳಿಂದ 2018 ಮತ್ತು 2019 ರ ನಡುವೆ ಬಾವಲಿಗಳಿಂದ ಸಂಗ್ರಹಿಸಲಾದ ಮಾದರಿಗಳ ಮೇಲೆ ಐಸಿಎಂಆರ್-ಎನ್ಐವಿ ಅಧ್ಯಯನವನ್ನು ನಡೆಸಲಾಗಿತ್ತು. .







