ಗಡಿ ಲಾಕ್‌ಡೌನ್ ಹೊರತಾಗಿಯೂ ಉಡುಪಿಗೆ ನಿಲ್ಲದ ಅಕ್ರಮ ಪ್ರವೇಶ
ಉಡುಪಿ, ಎ.14: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ ನಿರ್ಬಂಧಕಾಜ್ಞೆಯನ್ನು ಜಾರಿಗೊಳಿಸಿ ಹಲವು ಕಟ್ಟುನಿಟ್ಟಿನ ಉಪಕ್ರಮಗಳನ್ನು ಕೈಗೊಂಡಿದ್ದರೂ, ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಲಾಕ್‌ಡೌನ್ ಮಾಡಿದ್ದರೂ, ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಜನರು ಅಕ್ರಮವಾಗಿ ಜಿಲ್ಲೆ ಪ್ರವೇಶಿಸುವುದಕ್ಕೆ ಕಡಿವಾಣ ಬಿದ್ದಂತಿಲ್ಲ.
ಮಹಾರಾಷ್ಟ್ರ ರಾಜ್ಯದಲ್ಲಿ ನೋಂದಣಿಯಾಗಿರುವ ಅಂಬ್ಯುಲೆನ್ಸ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಹೇಳಲಾದ ವ್ಯಕ್ತಿಯೊಬ್ಬರ ಜೊತೆ ಸೋಮವಾರ ಸಂಜೆ 7:00 ಗಂಟೆಗೆ ಹೊರಟ ಆರು ಮಂದಿಯ ತಂಡ ಹೀಗೆ ಕಳ್ಳ ಮಾರ್ಗದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಇಂದು ಮಣಿಪಾಲಕ್ಕೆ ಆಗಮಿಸಿದೆ.
ಈ ತಂಡದಲ್ಲಿ ಅನಾರೋಗ್ಯ ವ್ಯಕ್ತಿಯೊಬ್ಬರೊಂದಿಗೆ ಇಬ್ಬರು ಸಂಗಡಿಗರು, ಚಾಲಕ ಹಾಗೂ ಸಹಾಯಕರನ್ನೊಳಗೊಂಡ ಒಟ್ಟು ಆರು ಮಂದಿ ಇದ್ದರು. ಇವರೆಲ್ಲ ಇಂದು ನೇರವಾಗಿ ಮಣಿಪಾಲ ಕೆಎಂಸಿಗೆ ಬಂದಿದ್ದು, ಇವರ ನೀಡಿದ ಮಾಹಿತಿಗಳಿಂದ ಸಂಶಯಗೊಂಡ ಕೆಎಂಸಿ ಆಡಳಿತ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಪರಿಶೀಲಿಸುವಂತೆ ತಿಳಿಸಿತ್ತು.
ಕೂಲಂಕಷವಾಗಿ ಪರಿಶೀಲಿಸಿದಾಗ ಈ ತಂಡ, ಮುಂಬೈಯಿಂದ ಮಣಿಪಾಲಕ್ಕೆ ಬರಲು ಸರಕಾರದಿಂದಾಗಲೀ ಅಥವಾ ಅಧಿಕೃತ ಪ್ರಾಧಿಕಾರದಿಂದಾಗಲೀ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ವೈದ್ಯಾಧಿಕಾರಿಗಳಿಂದ ಯಾವುದೇ ದೃಢೀಕರಣ ಪತ್ರವನ್ನೂ ಪಡೆದಿರಲಿಲ್ಲ. ಹೀಗಾಗಿ ಮುಂಬೈಯಿಂದ ಬಂದಿರುವ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಉಳಿದ ಐವರನ್ನು ಉದ್ಯಾವರ ಎಸ್‌ಡಿಎಂ ಕಾಲೇಜಿನಲ್ಲಿ 28 ದಿನಗಳ ಕ್ವಾರಂಟೈನ್‌ಗೆ ಸೇರಿಸಲಾಯಿತು.
ಇವರೆಲ್ಲರ ಸಂಪೂರ್ಣ ವೆಚ್ಚವನ್ನು ಅವರಿಂದಲೇ ಭರಿಸಲು ನಿರ್ಧರಿಸಲಾಯಿತು. ಅಲ್ಲದೇ ಅವರು ಬಂದ ಅಂಬುಲೆನ್ಸ್ ವಾಹನವನ್ನು ಈಗಾಗಲೇ ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಆದುದರಿಂದ ಇಂಥ ಘಟನೆಗಳು ಮರುಕಳಿಸದಂತೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.







