2022ರ ತನಕ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಬಹುದು: ಹಾರ್ವರ್ಡ್ ವಿಜ್ಞಾನಿಗಳು

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಕೊರೋನ ವೈರಸ್ ಸೋಂಕು ತಡೆಗಟ್ಟಲು ಕೇವಲ ಲಾಕ್ಡೌನ್ ಮಾತ್ರ ಸಾಲದು, ಆಗಾಗ ಸತತವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ನೀತಿಯನ್ನು 2022ರವರೆಗೂ ಅನುಸರಿಸುವ ಅಗತ್ಯವಿದೆ, ಈ ರೀತಿ ಮಾಡಿದಲ್ಲಿ ಆಸ್ಪತ್ರೆಗಳಲ್ಲಿ ಅತಿಯಾದ ಸಂಖ್ಯೆಯ ರೋಗಿಗಳು ದಾಖಲಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಹಾರ್ವರ್ಡ್ ವಿವಿಯ ವಿಜ್ಞಾನಿಗಳ ತಂಡ ಕಂಪ್ಯೂಟರ್ ಸಿಮ್ಯುಲೇಶನ್ ಮೂಲಕ ವಿವರಿಸಿದೆ. ಈ ಕುರಿತ ಮಾಹಿತಿ ವೈಜ್ಞಾನಿಕ ಪತ್ರಿಕೆ 'ಸಾಯನ್ಸ್'ನಲ್ಲಿ ಪ್ರಕಟಗೊಂಡಿದೆ.
ಅಮೆರಿಕಾದಲ್ಲಿ ಕೋವಿಡ್-19 ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪಿರುವಾಗ ಹಾಗೂ ಹಲವು ಇತರ ದೇಶಗಳು ಲಾಕ್ಡೌನ್ ಸಡಿಲಿಕೆ ಕುರಿತಂತೆ ಯೋಚಿಸುತ್ತಿರುವ ಸಂದರ್ಭ ಈ ಮಾಹಿತಿ ಹೊರಬಿದ್ದಿದೆ.
"ಈ ರೋಗದ ಪ್ರಮಾಣ ಗರಿಷ್ಠವಾಗಿರುವಂತಹ ಸಂದರ್ಭದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಲದು, ಆಗಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಧಿ ಜಾರಿಯ ಅಗತ್ಯವಿದೆ ''ಎಂದು ಸಂಶೋಧನಾ ತಂಡದ ಮುಖ್ಯಸ್ಥ ಸ್ಟೀಫನ್ ಕಿಸ್ಲರ್ ಹೇಳಿದ್ದಾರೆ.
"ಲಸಿಕೆಗಳು ಲಭ್ಯವಾದಾಗ ಲಾಕ್ಡೌನ್ಗಳ ಅವಧಿ ಕಡಿಮೆಯಾಗಬಹುದು ಅಥವಾ ಸಡಿಲಿಕೆಯಾಗಬಹುದು. ಆದರೆ ಇವುಗಳ ಅನುಪಸ್ಥಿತಿಯಲ್ಲಿ ಆಗಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಧಿಗಳಿದ್ದಲ್ಲಿ ಆಸ್ಪತ್ರೆಗಳಿಗೆ ತಮ್ಮ ಸವಲತ್ತುಗಳನ್ನು ಹೆಚ್ಚಿಸಲು ಹಾಗೂ ರೋಗಿಗಳ ಪ್ರಮಾಣ ಹೆಚ್ಚಿದಲ್ಲಿ ಅವರಿಗೆ ಅನುಕೂಲ ಕಲ್ಪಸುವ ನಿಟ್ಟಿನಲ್ಲಿ ಸಮಯಾವಕಾಶ ದೊರಕುತ್ತದೆ'' ಎಂದು ವರದಿಯಲ್ಲಿ ಹೇಳಲಾಗಿದೆ.
ಅದೇ ಸಮಯ ಯಾವುದೇ ವಿರಾಮವಿಲ್ಲದೆ ಅತಿಯಾದ ಸಾಮಾಜಿಕ ಅಂತರ ಕೂಡ ಕೆಟ್ಟ ಪರಿಣಾಮ ಬೀಳಬಹುದು. ಅಧ್ಯಯನದ ಒಂದು ಮಾದರಿಯಿಂದ ತಿಳಿದು ಬಂದಂತೆ ಅತಿಯಾದ ಸಾಮಾಜಿಕ ಅಂತರ ಅದೆಷ್ಟು ಪರಿಣಾಮಕಾರಿಯಾಯಿತೆಂದರೆ ರೋಗದ ವಿರುದ್ಧ ಪ್ರತಿಬಂಧಕ ಶಕ್ತಿಯೇ ಇಲ್ಲದಂತಾಯಿತು,'' ಎಂದು ವರದಿ ತಿಳಿಸಿದೆ.







