ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳ ಧರ್ಮಾಧಾರಿತ ಕೊರೋನ ವಾರ್ಡುಗಳು !
ಇದು ಸರಕಾರದ ನಿರ್ಧಾರ ಎಂದ ವೈದ್ಯಕೀಯ ಅಧೀಕ್ಷಕ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಕೋವಿಡ್-19 ರೋಗಿಗಳಿಗೆ 1,200 ಹಾಸಿಗೆಗಳನ್ನು ಮೀಸಲಾಗಿರಿಸಿರುವ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ವಾರ್ಡುಗಳನ್ನು ರೋಗಿಗಳ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಲಾಗಿದ್ದು ಒಂದು ವಾರ್ಡ್ ಹಿಂದು ರೋಗಿಗಳಿಗೆ ಹಾಗೂ ಇನ್ನೊಂದು ವಾರ್ಡ್ ಮುಸ್ಲಿಂ ರೋಗಿಗಳಿಗೆ ಸರಕಾರದ ನಿರ್ಧಾರದಂತೆ ಮೀಸಲಿರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಗುಣವಂತ್ ಎಚ್.ರಾಠೋಡ್ ಹೇಳಿದ್ದಾರೆ ಎಂದು Indianexpress.com ವರದಿ ಮಾಡಿದೆ.
ಇದಕ್ಕೆ ಕಾರಣವನ್ನು ಕೇಳಿದಾಗ ಡಾ.ರಾಠೋಡ್ ಅವರು ‘ಸರಕಾರವನ್ನೇ ಕೇಳಿ’ ಎಂದಿದ್ದಾರೆ. ಆದರೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ನಿತಿನ್ ಪಟೇಲ್ ಮಾತ್ರ ತಮಗೆ ಈ ವಿಚಾರ ತಿಳಿದಿಲ್ಲ ಎಂದಿದ್ದಾರೆ.
ಈ ಆಸ್ಪತ್ರೆಗೆ ದಾಖಲಾಗಿದ್ದ 186 ಶಂಕಿತ ರೋಗಿಗಳ ಪೈಕಿ 150 ಮಂದಿಗೆ ಕೊರೋನ ವೈರಸ್ ಪಾಸಿಟಿವ್ ಆಗಿದ್ದು ಕನಿಷ್ಠ 50 ಮಂದಿ ಮುಸ್ಲಿಮರಾಗಿದ್ದಾರೆ. ‘‘ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡುಗಳಿರುತ್ತವೆ ಆದರೆ ಧರ್ಮದ ಆಧಾರದಲ್ಲಿ ವಾರ್ಡ್ ವಿಂಗಡಿಸಲಾಗಿರುವುದರ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ,’’ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.
ಅಹ್ಮದಾಬಾದ್ ಕಲೆಕ್ಟರ್ ಕೆ.ಕೆ ನಿರಾಲ ಕೂಡ ತಮಗೆ ಈ ಕುರಿತಂತೆ ತಿಳಿದಿಲ್ಲ ಎಂದಿದ್ದಾರೆ.