ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಹೊಸದಿಲ್ಲಿ, ಎ.15: ಹದಿಮೂರನೇ ಆವೃತ್ತಿಯ ಐಪಿಎಲ್ - 20 ಟೂರ್ನಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಮೇ 3 ವರೆಗೆ ಲಾಕ್‌ಡೌನ್ ವಿಸ್ತರಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದರು.
ಐಪಿಎಲ್ ಪಂದ್ಯಾವಳಿ ಮಾರ್ಚ್ 29ರಿಂದ ಮೇ 24ರ ತನಕ ನಿಗದಿಯಾಗಿತ್ತು. ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣದಿಂದಾಗಿ ಪ್ರಾರಂಭದ ದಿನಾಂಕವನ್ನು ಅಧಿಕೃತವಾಗಿ ಎಪ್ರಿಲ್ 15 ಕ್ಕೆ ಮುಂದೂಡಲಾಗಿತ್ತು. ಇದೀಗ ಲಾಕ್ ಡೌನ್ ವಿಸ್ತರಣೆಯ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿ ಈ ವರ್ಷ ನಡೆಯುವುದೇ ಅನುಮಾನ ಎನ್ನುವಂತಾಗಿದೆ.
ಸಾಂಕ್ರಾಮಿಕ ರೋಗ ಕೊರೋನ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರಿಕೆಟ್ ಟೂರ್ನಮೆಂಟ್ ಸ್ಥಗಿತಗೊಂಡಿದೆ. ಎಲ್ಲಾ ಅಂತರ್ ರಾಷ್ಟ್ರೀಯ ಕ್ರಿಕೆಟ್‌ಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ರದ್ದುಪಡಿಸಲಾಗಿದೆ.. ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಬಿಸಿಸಿಐ ಹಿಂತೆಗೆದುಕೊಂಡಿತ್ತು. ,





