ಗೇರುಬೀಜ ಸಂಸ್ಕರಣಾ ಘಟಕಗಳ ಆರಂಭಕ್ಕೆ ಷರತ್ತುಬದ್ದ ಅನುಮತಿ
ಉಡುಪಿ, ಎ.15: ಕೊರೋನಾ ವೈರಸ್‌ನ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನ್ನು ಕೇಂದ್ರ ಸರಕಾರ ಮೇ 3ರವರೆಗೆ ವಿಸ್ತರಿಸಿದ್ದರೂ, ಕೆಲವೊಂದು ಅಗತ್ಯವಾದ ಆಹಾರ ಸಂಸ್ಕರಣೆ ಘಟಕಗಳಿಗೆ ಕಾರ್ಯಾಚರಣೆ ನಡೆಸಲು ರಕಾರ ಅನುಮತಿ ನೀಡುತ್ತಿದೆ.
ಈಗ ಮಾರುಕಟ್ಟೆಗೆ ಆಗಮಿಸುತ್ತಿರುವ ಸ್ಥಳೀಯ ಗೇರುಬೀಜ ಕೃಷಿಕರಿಗೆ ಉತ್ತಮ ಧಾರಣೆ ಒದಗಿಸಿಕೊಟ್ಟು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೇರುಬೀಜ ಸಂಸ್ಕರಣಾ ಘಟಕಗಳನ್ನು ಕೆಲವೊಂದು ಷರತ್ತು ವಿಧಿಸಿ ಕಾರ್ಯಾಚರಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.
ಸಂಸ್ಕರಣಾ ಘಟಕದ ಒಟ್ಟು ಕಾರ್ಮಿಕರ ಶೇ.25ರಷ್ಟು ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡು. ಸಂಸ್ಕರಣೆಯನ್ನು ಆರಂಭಿಸಬಹುದು. ಘಟಕ ಆರಂಬಿಸುವ ಮುನ್ನ ಕಾರ್ಮಿಕರ ಆರೋಗ್ಯ ಪರೀಕ್ಷೆಯನ್ನು ಸ್ಥಳೀಯ ಸರಕಾರಿ ಆರೋಗ್ಯ ಕೇಂದ್ರದಿಂದ ನಡೆಸಬೇಕು. ಆರೋಗ್ಯವಂತ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಬೇಕು. ಸಂಸ್ಕರಣಾ ಘಟಕದಲ್ಲಿ ಕಾರ್ಯನಿರ್ವಸುವ ಸಿಬ್ಬಂದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸ್ಯಾನಿಟೈಜರ್, ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಸ್ಥಳೀಯ ರ್ಕಾುಕರನ್ನೇ ಹೆಚ್ಚಾಗಿ ಕೆಲಸಕ್ಕೆ ನಿಯೋಜಿಸಬೇಕು. ಕಾರ್ಮಿಕರನ್ನು ಕರೆತರಲು ಮತ್ತು ವಾಪಸು ಬಿಡಲು ಯಾವುದೇ ಸಾರ್ವಜನಿಕ ವಾಹನ ಬಳಸುವಂತಿಲ್ಲ. ಕಾರ್ಖಾನೆ ಹಾಗೂ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಗೇರುಬೀಜಗಳನ್ನು ಸ್ಥಳೀಯ ರೈತರಿಂದ ಉತ್ತಮ ಧಾರಣೆ ನೀಡಿ ಖರೀದಿಸಬೇಕು.
ಅಲ್ಲದೇ ಸಕ್ಷಮ ಪ್ರಾಧಿಕಾರದಿಂದ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ ಗಳಿಗೆ ಬದ್ದವಾಗಿರಬೇಕು ಎಂಬ ಷರತ್ತುಗಳೊಂದಿಗೆ ಗೇರುಬೀಜ ಸಂಸ್ಕರಣಾ ಘಟಕಗಳು ಕಾರ್ಯಾಚರಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.







