ರಾಜ್ಯದಲ್ಲಿ ಕೊರೋನ ಸಾವಿನ ಸಂಖ್ಯೆ ಮತ್ತೆ ಏರಿಕೆ: ಎರಡು ದಿನಗಳಲ್ಲಿ 6 ಮಂದಿ ಬಲಿ
ಬುಧವಾರ 19 ಪ್ರಕರಣಗಳು ಪಾಸಿಟಿವ್

ಬೆಂಗಳೂರು, ಎ.15: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ ಮಹಿಳೆ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 12ಕ್ಕೆ ಏರಿದೆ.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 80 ವರ್ಷದ ಮಹಿಳೆಯೊಬ್ಬರು ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದು ಸೋಮವಾರ ಸಂಜೆಯ ಬಳಿಕ ಕೊರೋನದಿಂದ ರಾಜ್ಯದಲ್ಲಿ ಸಂಭವಿಸಿದ ಆರನೇ ಸಾವು.
ಅಲ್ಲದೇ, ಸೋಂಕಿತರ ಸಂಖ್ಯೆಯಲ್ಲೂ ತೀವ್ರ ಹೆಚ್ಚಳವಾಗಿದ್ದು, ಇಂದು ಸಂಜೆ 5 ಗಂಟೆಯ ವರದಿಯಂತೆ ರಾಜ್ಯದಲ್ಲಿ 19 ಹೊಸ ಪ್ರಕರಣಗಳು ಪಾಸಿಟಿವ್ ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಒಟ್ಟು 279 ಆಗಿದೆ. ಇದುವರೆಗೆ 80 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಸೋಮವಾರ ರಾತ್ರಿ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ವಿಜಯಪುರದಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಮೂರು ಸಾವು ಸಂಭವಿಸಿತ್ತು. ಒಟ್ಟಾರೆ ರಾಜ್ಯದಲ್ಲಿ ಕೊರೋನದಿಂದ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿದೆ
Next Story





