ಲಾಕ್‌ಡೌನ್:ಪ್ರಧಾನಿ ಮೋದಿ ಕಾರ್ಯಪಡೆಯೊಂದಿಗೆ ಚರ್ಚಿಸಿರಲಿಲ್ಲ ಎಂಬ ವರದಿ ತಳ್ಳಿ ಹಾಕಿದ ಸರಕಾರ
ಹೊಸದಿಲ್ಲಿ,ಎ.15: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವ್ಯಾಪಿ ಲಾಕ್‌ಡೌನ್ ವಿಸ್ತರಣೆಯನ್ನು ಘೋಷಿಸುವ ಮುನ್ನ 21 ಸದಸ್ಯರ ‘ವೈಜ್ಞಾನಿಕ ಕೋವಿಡ್-19 ಸಮಿತಿ’ಯೊಂದಿಗೆ ಸಮಾಲೋಚಿಸಿರಲಿಲ್ಲ ಎಂಬ ಮಾಧ್ಯಮ ವರದಿಯನ್ನು ಸರಕಾರವು ತಳ್ಳಿಹಾಕಿದೆ.
‘ಲಾಕ್‌ಡೌನ್ ವಿಸ್ತರಣೆಗೆ ಮುನ್ನ ಪ್ರಧಾನಿಯವರು ಕೋವಿಡ್-19 ಸಮಿತಿಯೊಂದಿಗೆ ಸಮಾಲೋಚಿಸಿರಲಿಲ್ಲ ಎಂದು ನ್ಯೂಸ್ ಮ್ಯಾಗಝಿನ್‌ವೊಂದು ವರದಿ ಮಾಡಿದೆ. ವಾಸ್ತವದಲ್ಲಿ ಕಾರ್ಯಪಡೆಯೊಂದಿಗೆ ಚರ್ಚಿಸಿದ ನಂತರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ’ ಸರಕಾರದ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಬುಧವಾರ ಟ್ವೀಟಿಸಿದೆ.
ಇದಕ್ಕೆ ಕೆಲವೇ ನಿಮಿಷಗಳ ಮುನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ‘ಕೋವಿಡ್-19 ಕಾರ್ಯಪಡೆ ಕುರಿತು ಸುಳ್ಳು ಹೇಳಿಕೆಗಳನ್ನು ಒಳಗೊಂಡಿರುವ ಮಾಧ್ಯಮ ವರದಿಯೊಂದು ಪ್ರಕಟವಾಗಿದೆ. ವಾಸ್ತವ ವಿಷಯವೆಂದರೆ ಕಾರ್ಯಪಡೆಯು ಕಳೆದೊಂದು ತಿಂಗಳಲ್ಲಿ 14 ಸಲ ಸಭೆ ಸೇರಿತ್ತು ಮತ್ತು ಅದು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳಲ್ಲಿ ಎಲ್ಲ ಸದಸ್ಯರು ಭಾಗಿಯಾಗಿದ್ದರು. ದಯವಿಟ್ಟು ಇಂತಹ ಊಹಾಪೋಹಗಳನ್ನು ನಿವಾರಿಸಿ ’ಎಂದು ಟ್ವೀಟಿಸಿತ್ತು.
ಕೊರೋನ ವೈರಸ್ ಪಿಡುಗನ್ನು ಎದುರಿಸಲು ಸಮಗ್ರ ಮತ್ತು ಏಕೀಕೃತ ಯೋಜನೆಯೊಂದನ್ನು ರೂಪಿಸುವಲ್ಲಿ ಪ್ರಧಾನಿ ಮತ್ತು ಅವರ ಸರಕಾರಕ್ಕೆ ನೆರವಾಗಲು ಕಳೆದ ತಿಂಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ 11 ಅಧಿಕಾರಯುತ ಗುಂಪುಗಳನ್ನು ರಚಿಸಲಾಗಿತ್ತು. ಕೊರೋನ ವೈರಸ್ ಬಿಕ್ಕಟ್ಟಿನ ಪರಿಣಾಮಗಳನ್ನು ನಿಭಾಯಿಸಲು ವ್ಯೂಹಾತ್ಮಕ ಕಾರ್ಯಪಡೆಯೊಂದನ್ನು ಸಹ ಸ್ಥಾಪಿಸಲಾಗಿತ್ತು.