ಮುಂಬೈ:ಮಿನಿಟ್ರಕ್‌ನಲ್ಲಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 25 ವಲಸೆ ಕಾರ್ಮಿಕರ ಬಂಧನ

ಮುಂಬೈ,ಎ.15: ಪನಗರ ಸಾಂತಾಕ್ರೂಝ್‌ನಿಂದ ಉತ್ತರ ಪ್ರದೇಶಕ್ಕೆ ಮಿನಿಟ್ರಕ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದ 25 ವಲಸೆ ಕಾರ್ಮಿಕರನ್ನು ಮತ್ತು ಚಾಲಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸಾಂತಾಕ್ರೂಝ್‌ನ ಭೈಯ್ಯಾ ವಾಡಿಯ ನಿವಾಸಿಗಳಾದ ಈ ಕಾರ್ಮಿಕರು ದೇಶವ್ಯಾಪಿ ಲಾಕ್‌ಡೌನ್ ವಿಸ್ತರಣೆಯಿಂದ ಕಳವಳಗೊಂಡಿದ್ದರು.
ಸಾಂತಾಕ್ರೂಝ್‌ನ ಮೀರಾ ಬಾಗ್‌ನಲ್ಲಿ ಬೆಳಗಿನ ಜಾವ ಗಸ್ತುನಿರತ ಪೋಲಿಸರು ಮಿನಿಟ್ರಕ್‌ನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಕುರಿಗಳಂತೆ ತುಂಬಿದ್ದ ಕಾರ್ಮಿಕರು ಪತ್ತೆಯಾಗಿದ್ದಾರೆ. ಇವರು ತಮ್ಮ ಪ್ರಯಾಣಕ್ಕೆ ತಲಾ 1,500 ರೂ.ಗಳನ್ನು ಪಾವತಿಸಿದ್ದರು. ಮಿನಿಟ್ರಕ್‌ನ ಮಾಲಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಮಂಗಳವಾರ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಪ್ರಯಾಣಿಸಲು ಇಲ್ಲಿಯ ಬಾಂದ್ರಾ ರೈಲು ನಿಲ್ದಾಣದ ಎದುರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ವಲಸೆ ಕಾರ್ಮಿಕರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ವಸತಿ ಮತ್ತು ಆಹಾರವನ್ನು ಒದಗಿಸುವುದಾಗಿ ಆಡಳಿತವು ಈ ಕಾರ್ಮಿಕರಿಗೆ ಭರವಸೆ ನೀಡಿದೆ.





