ಬೆಂಗಳೂರು: ಲಾಕ್ಡೌನ್ ನಿಂದಾಗಿ ಬೀದಿಗೆ ಬಿದ್ದಿದ್ದ ಜಾರ್ಖಂಡ್ ಮೂಲದ ಗರ್ಭಿಣಿಗೆ ಸರಕಾರದಿಂದ ಆಶ್ರಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.15: ಉದ್ಯೋಗ ಹುಡುಕಿಕೊಂಡು ಕರ್ನಾಟಕಕ್ಕೆ ವಲಸೆ ಬಂದು ಲಾಕ್ಡೌನ್ನ ಪರಿಣಾಮದಿಂದಾಗಿ ಬೀದಿಗೆ ಬಿದ್ದಿದ್ದ ಜಾರ್ಖಂಡ್ ಮೂಲದ ಕಟ್ಟಡ ಕಾರ್ಮಿಕರಾದ ಗರ್ಭಿಣಿ ಮಹಿಳೆಗೆ ರಾಜ್ಯ ಸರಕಾರ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದೆ.
ಜಾರ್ಖಂಡ್ ರಾಜ್ಯದ ಮಿಯಾಬಾದ್ ನಗರದ ಕುಸುಮಾದೇವಿ ಎಂಬುವವರು ಏಳು ತಿಂಗಳ ಗರ್ಭಿಣಿಯಾಗಿದ್ದು, ಉದ್ಯೋಗ ದೊರಕಿಸಿಕೊಡುವುದಾಗಿ ತಮ್ಮ ಸಂಬಂಧಿ ನೀಡಿದ ಭರವಸೆಯ ಮೇರೆಗೆ ತನ್ನ ಪತಿಯ ಜತೆಗೆ ಬೆಂಗಳೂರಿಗೆ ಆಗಮಿಸಿದ್ದರು. ಕಟ್ಟಡ ಕಾರ್ಮಿಕರಾಗಿ ದುಡಿದು ತಮ್ಮ ಅನ್ನವನ್ನು ಸಂಪಾದಿಸಿಕೊಳ್ಳುತ್ತಿದ್ದರು. ತಾವು ಕೆಲಸ ಮಾಡುವ ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು.
ಇದೇ ವೇಳೆ ಮಾ.22 ರಂದು ಜನತಾ ಕರ್ಫ್ಯೂ ಹಾಗೂ ಮಾ.24 ರಂದು ಘೋಷಣೆಯಾದ ಮೊದಲ ಹಂತದ ಲಾಕ್ಡೌನ್ ಈ ದಂಪತಿಯ ಬಾಳಿನಲ್ಲಿ ಬರ ಸಿಡಿಲು ಬಡಿದಂತಾಗಿದೆ. ಒಂದೆಡೆ ಉದ್ಯೋಗವಿಲ್ಲ, ಮತ್ತೊಂದು ಕಡೆ ಆದಾಯವಿಲ್ಲ, ಸೂರು ಇಲ್ಲ. ಮೊದಲ ಕೆಲವು ದಿನ ತಮ್ಮ ಸಂಬಂಧಿಯ ಮನೆಯಲ್ಲಿ ಆಶ್ರಯ ಪಡೆದ ಈ ದಂಪತಿಗೆ ಮನೆಯವರಯ ನಮಗೂ ಕಷ್ಟವಿದೆ, ತಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೇಳಿದಾಗ ದಿಕ್ಕು ತೋಚದಂತಾಗಿದೆ.
ಇವರ ಕಷ್ಟವನ್ನು ನೋಡಿದ ನೆರೆಮನೆಯವರು ಮನೆಯಲ್ಲಿರಿಸಿಕೊಂಡಿದ್ದರು. ಆದರೆ, ಲಾಕ್ಡೌನ್ ಮತ್ತೆ ಮುಂದುವರಿದಿದ್ದನ್ನು ಮನಗಂಡು ಜಾಗ ಖಾಲಿ ಮಾಡುವಂತೆ ಮನವಿ ಮಾಡಿದ್ದಾರೆ. ಆಗ ಮನೆಯಿಲ್ಲದೆ, ತಿನ್ನಲು ಇಲ್ಲದೇ ಪರಿತಪಿಸುತ್ತಿದ್ದರು. ಇದನ್ನು ಕಂಡ ದಾರಿಹೋಕರೊಬ್ಬರು ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿದ್ದರಿಂದ, ಸರಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ನಂತರ, ಸ್ವಯಂ ಸೇವಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧಕ್ಕೆ ಕರೆತಂದಿದ್ದಾರೆ. ಮೊದಲು ಊಟ ಮಾಡಿಸಿ, ಅವರ ಕಷ್ಟ-ಸಂಕಷ್ಟವನ್ನು ಆಲಿಸಿದ ಎಲ್ಲರ ಕಣ್ಣಾಲೆಗಳು ತುಂಬಿ ಹೋಗಿದ್ದವು. ತದನಂತರ, ಕಾರ್ಮಿಕ ರಾಜ್ಯ ವಿಮಾ ಇಲಾಖೆಯ(ಇಎಸ್ಐ) ಆಸ್ಪತ್ರೆಯ ವೈದ್ಯರು ಗರ್ಭಿಣಿ ಮಹಿಳೆಯ ಆರೋಗ್ಯ ತಪಾಸಣೆ ಮಾಡಿದ್ದಾರೆ. ಲಾಕ್ಡೌನ್ ಮುಕ್ತಾಯಗೊಳ್ಳುವವರೆಗೂ ಈ ಅವಧಿಗೆ ರಾಜ್ಯ ಸರಕಾರದ ಅತಿಥಿ ಗೃಹದಲ್ಲಿ ಭೋಜನ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಗರ್ಭಿಣಿಗೆ ಅವಶ್ಯಕತೆ ಇರುವ ಎಲ್ಲಾ ಔಷಧೋಪಚಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಟ್ಟಾರೆ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ದಂಪತಿಗೆ ಇದೀಗ ಆಶ್ರಯ ದೊರೆತು, ದಂಪತಿಯ ಬಾಳಲ್ಲಿ ಆಶಾಕಿರಣ ಮೂಡಿಸಿದೆ.







