ಕೇಂದ್ರ ಸರಕಾರದ ‘ಲಾಕ್‍ಡೌನ್’ ಮಾರ್ಗಸೂಚಿ ಬಿಡುಗಡೆ: ತುರ್ತು ಸಭೆ ನಡೆಸಿದ ಸಿಎಂ

ಬೆಂಗಳೂರು, ಎ.15: ಕೋವಿಡ್-19 ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‍ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿದ ಬೆನ್ನಲ್ಲೆ ಇಂದು ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ರಾಜ್ಯದಲ್ಲಿ ಯಾವುದೆ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು. ಎರಡನೆ ಹಂತದ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರಮುಖವಾಗಿ ಮುಂಬೈನಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲೆ ಸಾವಿರಾರು ಮಂದಿ ವಲಸೆ ಕಾರ್ಮಿಕರು ಬೀದಿಗಿಳಿದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ನಮ್ಮ ರಾಜ್ಯದಲ್ಲಿ ಅಂತಹ ಯಾವುದೆ ಬೆಳವಣಿಗೆಗಳಿಗೆ ಅವಕಾಶ ಕಲ್ಪಿಸಬಾರದು. ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ಅವರಿಗೆ ಆದ್ಯತೆಯ ಮೇರೆಗೆ ಸರಕಾರದಿಂದ ಅಗತ್ಯ ನೆರವನ್ನು ತಲುಪಿಸುವ ಕೆಲಸವನ್ನು ಸಚಿವರು, ಅಧಿಕಾರಿಗಳು ಮಾಡಬೇಕು ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.
ಲಾಕ್‍ಡೌನ್ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ವಿಚಾರದ ಕುರಿತು ನಾಲ್ವರು ಹಿರಿಯ ಸಚಿವರಿಗೆ ಪ್ರತ್ಯೇಕವಾದ ಜವಾಬ್ದಾರಿಗಳನ್ನು ಮುಖ್ಯಮಂತ್ರಿ ಹಂಚಿಕೆ ಮಾಡಿದ್ದು, ಲಾಕ್‍ಡೌನ್ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಮುಂದುವರೆಸುವಂತೆಯೂ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ಯಾವುದೆ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕಂದಾಯ ಸಚಿವ ಆರ್.ಅಶೋಕ್‍ಗೆ ವಹಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೆ ರೀತಿಯ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೆಗಲಿಗೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರಿಗೆ ಯಾವುದೆ ಬಗೆಯ ತೊಂದರೆಗಳಾಗದಂತೆ ಹಾಗೂ ಸರಕಾರದಿಂದ ಅವರಿಗೆ ಲಭಿಸಬೇಕಿರುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಜವಾಬ್ದಾರಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಗೆ ವಹಿಸಲಾಗಿದೆ.
ಕೃಷಿ ಚಟುವಟಿಕೆಗಳ ಮೇಲೆ ನಿಗಾವಹಿಸಿ, ರೈತರು ಬೆಳೆದ ಬೆಳೆಗಳ ಸಾಗಣೆ, ರಸಗೊಬ್ಬರ, ಬಿತ್ತನೆ ಬೀಜ ರೈತರಿಗೆ ತಲುಪುವ ನಿಟ್ಟಿನಲ್ಲಿ ನಿಗಾವಹಿಸಿ ಯಾವುದೆ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕೆಂಬ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣಗೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಎ.20ರ ಬಳಿಕ ಕೆಲವು ಕಡೆ ಲಾಕ್‍ಡೌನ್ ಸಡಿಲಗೊಳಿಸುವ ಸೂಚನೆ ನೀಡಿರುವುದರಿಂದ, ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸುವ ವಿಚಾರದ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.







