ಮೈಸೂರು ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ ಒಟ್ಟು 58
ಇದುವರೆಗೆ 12 ಮಂದಿ ಗುಣಮುಖ

ಮೈಸೂರು,ಎ.15: ಕೊರೋನಾ ಭೀತಿಗೆ ಕಂಗೆಟ್ಟಿರುವ ಮೈಸೂರು ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕೊರೋನ ದೃಡಪಟ್ಟಿದ್ದು, ಒಟ್ಟು 58 ಮಂದಿಯಲ್ಲಿ 12 ಜನ ಆಸ್ಪತ್ರೆಯಿಂದ ಬಿಡುಗಡೆಗೊಂಡು ಇದೀಗ 46 ಮಂದಿ ಕೊರೋನ ಸೋಂಕಿತರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿಯ ನೌಕರರಲ್ಲಿ ಕಂಡು ಬಂದ ಕೊರೋನಾ ಸೋಂಕು ಆತಂಕವನ್ನುಂಟು ಮಾಡಿದೆಯಾದರು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದ ಸುಮಾರು 300ಕ್ಕೂ ಹೆಚ್ಚು ಮಂದಿಯ ಅವಧಿ ಪೂರ್ಣಗೊಂಡು ಅವರ ರಕ್ತ ಮತ್ತು ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಹಂತ ಹಂತವಾಗಿ ಮಾಡುತ್ತಿರುವುದರಿಂದ ಕೆಲವರಿಗೆ ಪಾಸಿಟಿವ್ ಬಂದರೆ ಮತ್ತೆ ಕೆಲವರಿಗೆ ನೆಗಿಟಿವ್ ಬರುತ್ತಿದೆ. ಹಾಗಾಗಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಹೋಂ ಕ್ವಾರಂಟೈನ್‍ನಲ್ಲಿರುವ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿಯ ಅವಧಿಯೂ ಪೂರ್ಣಗೊಂಡಿದ್ದು, ಅವರ ಪರೀಕ್ಷೆಯನ್ನು ಮಾಡಲಾಗುತ್ತಿದೆಯಾದರೂ ಇನ್ನೂ ವರದಿ ಬಂದಿಲ್ಲ, ಅವರಲ್ಲಿ ಮತ್ತಷ್ಟು ಮಂದಿಗೆ ಕೊರೋನ ಪಾಸಿಟಿವ್ ಬಂದರೂ ಆಶ್ಚರ್ಯಪಡುವಂತಿಲ್ಲ.
ಎ.14 ರ ಮಂಗಳವಾರದ ವರೆಗೆ 48 ಮಂದಿ ಇದ್ದ ಕೊರೋನ ಸೋಂಕಿತರ ಸಂಖ್ಯೆ ಬುಧವಾರ ಹತ್ತು ಮಂದಿ ಸೇರಿ ಒಟ್ಟು 58ಕ್ಕೆ ಏರಿದೆ. ಇಂದೇ 12 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರಿಂದ 46ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ 3,635 ಮಂದಿ ಶಂಕಿತ ವ್ಯಕ್ತಿಗಳಿದ್ದು, 2,025 ಮಂದಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ, 1,564 ಮಂದಿ ಹೋಂ ಕ್ವಾರಂಟೈನ್‍ಗಳಿದ್ದು 46 ಮಂದಿ ಕೊರೋನ ಪಾಸಿಟಿವ್ ವ್ಯಕ್ತಿಗಳಿದ್ದಾರೆ. 1,330 ಮಂದಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, 1252 ಮಂದಿಗೆ ನೆಗೆಟಿವ್ ಬಂದಿದೆ. ಒಟ್ಟು 58 ಮಂದಿಗೆ ಕೊರೋನ ಪಾಸಿಟಿವ್ ದೃಡಪಟ್ಟಿದೆ. ಕೊರೋನ ದೃಢಪಟ್ಟಿರುವ ಎಲ್ಲರಿಗೂ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೊಲೇಷನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.







