ದೇಶದಲ್ಲಿ 12 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಎ.12: ದೇಶದಲ್ಲಿ ಕೊರೋನ ವೈರಸ್ ಹಾವಳಿ ಮಿತಿ ಮೀರಿದ್ದು, ಮಂಗಳವಾರ ಸಂಜೆಯಿಂದೀಚೆಗೆ 24 ತಾಸುಗಳಲ್ಲಿ 39 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 392ಕ್ಕೇರಿದೆ. ಬುಧವಾರ ಒಂದೇ ದಿನದಲ್ಲಿ 1118 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,321ಕ್ಕೇರಿದೆ. ಈವರೆಗೆ 1343 ಮಂದಿ ಗುಣಮುಖರಾಗಿದ್ದಾರೆ.
ಮಂಗಳವಾರ ಸಂಜೆಯಿಂದೀಚೆಗೆ ಮಹಾರಾಷ್ಟ್ರದಲ್ಲಿ 18 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಆರು, ಗುಜರಾತ್ ನಲ್ಲಿ ನಾಲ್ವರು, ಮಧ್ಯಪ್ರದೇಶದಲ್ಲಿ ಮೂವರು, ದಿಲ್ಲಿ ಮತ್ತು ಕರ್ನಾಟಕದಲ್ಲಿ ತಲಾ ಇಬ್ಬರು, ತೆಲಂಗಾಣ, ತಮಿಳುನಾಡು, ಪಂಜಾಬ್ ಹಾಗೂ ಮೇಘಾಲಯದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು ಕೊರೋನಾ ಹಾವಳಿಯಿಂದ ಬೀಹಾರವು ತೊಂದರೆಗೆ ಸಿಲುಕಿಲ್ಲ. ಆದರೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಖಂಡಿತವಾಗಿಯೂ ಸಂಕಷ್ಟದಲ್ಲಿವೆ ಎಂದು ಹೇಳಿದ್ದಾರೆ.







