ಕೊರೋನ: ರಾಜ್ಯದಲ್ಲಿ ಕಳೆದ 19 ಗಂಟೆಯಲ್ಲಿ 34 ಪ್ರಕರಣ ಪತ್ತೆ
ಒಂದೂವರೆ ವರ್ಷದ ಮಗು ಸಹಿತ ನಾಲ್ವರು ಮಕ್ಕಳಲ್ಲಿ ಸೋಂಕು ದೃಢ, ಸೋಂಕಿತರ ಒಟ್ಟು ಸಂಖ್ಯೆ 313ಕ್ಕೇರಿಕೆ

ಬೆಂಗಳೂರು, ಎ.16: ರಾಜ್ಯದಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳನ್ನೊಳಗೊಂಡು ಮತ್ತೆ 34 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನಲ್ಲಿ ಬುಧವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ ರಾಜ್ಯದಲ್ಲಿ 34 ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಲಾಗಿದೆ.
ಈ ಪೈಕಿ ವಿಜಯಪುರದಲ್ಲಿ ಒಂದೂವರೆ ವರ್ಷದ ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ವಿಜಯಪುರದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ ಬೆಂಗಳೂರು ನಗರದಲ್ಲಿ 13 ವರ್ಷದ ಓರ್ವ ಬಾಲಕ, ಬೆಳಗಾವಿ ಹಿರೇಬಾಗವಾಡಿಯಲ್ಲಿ 16 ವರ್ಷದ ಬಾಲಕಿ, ವಿಜಯಪುರದಲ್ಲಿ 12 ವರ್ಷದ ಬಾಲಕನೋರ್ವನಲ್ಲಿ ಸೋಂಕು ದೃಢಪಟ್ಟಿರುವುದಾಗಿ ವರದಿ ತಿಳಿಸಿದೆ.
ಕಳೆದ 19 ಗಂಟೆಗಳಲ್ಲಿ ಇದುವರೆಗೆ ಅತೀ ಹೆಚ್ಚು ಅಂದರೆ 34 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಇಲ್ಲಿ ಹೊಸದಾಗಿ 17 ಮಂದಿಯಲ್ಲಿ ಕೊರೋನ ದೃಢಪಟ್ಟಿದೆ. ಉಳಿದಂತೆ ವಿಜಯಪುರದಲ್ಲಿ ಏಳು, ಬೆಂಗಳೂರು ನಗರದಲ್ಲಿ ಐದು, ಮೈಸೂರಿನಲ್ಲಿ ಮೂರು, ಕಲಬುರಗಿ ಮತ್ತು ಗದಗದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ಬುಲೆಟಿನ್ ತಿಳಿಸಿದೆ.
ಈ ನಡುವೆ ರಾಜ್ಯದಲ್ಲಿ ಕೊರೋನ ಸೋಂಕಿಗೊಳದ 313 ಮಂದಿಯ ಪೈಕಿ 82 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 34 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 313ಕ್ಕೆ ಏರಿದೆ. ಇದುವರೆಗೆ 13 ಜನ ಮೃತಪಟ್ಟು, 82 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನಾಗರಿಕರು ಆತಂಕ ಪಡೆದೆ ಮನೆಯಲ್ಲಿಯೇ ಇರಬೇಕೆಂದು ವಿನಂತಿ#ಮನೆಯಲ್ಲೇಇರಿ pic.twitter.com/nuRhsjpbA5
— B Sriramulu (@sriramulubjp) April 16, 2020







