ನೆರವು ನೀಡಲು ಸ್ವಯಂಸೇವಕಿಯಾದ ಫುಟ್ಬಾಲ್ ಕೋಚ್

ಹೊಸದಿಲ್ಲಿ, ಎ.15: ಗೋಕುಲಂ ಕೇರಳ ಎಫ್‌ಸಿ ಭಾರತೀಯ ಮಹಿಳಾ ಲೀಗ್ ಪ್ರಶಸ್ತಿ ಜಯಿಸಲು ಮಾರ್ಗದರ್ಶನ ನೀಡಿರುವ ಫುಟ್ಬಾಲ್ ಕೋಚ್ ಪ್ರಿಯಾ ಪಿ.ವಿ. ಪ್ರಸ್ತುತ ಅಗತ್ಯವಿರುವವರಿಗೆ ಔಷಧಿ ಹಾಗೂ ಆಹಾರವನ್ನು ಪೂರೈಸುವ ಸಹಾಯವಾಣಿ ಕೇಂದ್ರದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕೊರೋನ ವೈರಸ್‌ನಿಂದಾಗಿ ಲಾಕ್‌ಡೌನ್ ಆಗಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದಾರೆ.
ಭಾರತ ಹಾಗೂ ಜಮ್ಶೆಡ್‌ಪುರ ಎಫ್‌ಸಿ ಆಟಗಾರ ಸಿ.ಕೆ. ವಿನೀತ್ ಕಾರ್ಯ ನಿರ್ವಹಿಸುತ್ತಿರುವ ಕಣ್ಣೂರಿನ ಸಹಾಯ ವಾಣಿ ಕೇಂದ್ರದಲ್ಲಿ ಪ್ರಿಯಾ ಕೂಡಾ ಕೆಲಸ ಮಾಡುತ್ತಿದ್ದಾರೆ.
ಎಲ್ಲ ಔಷಧಿಗಳ ಕೋರಿಕೆಯನ್ನು ಪೂರೈಸುವುದು ಸಹಾಯವಾಣಿಯ ಅತ್ಯಂತ ದೊಡ್ಡ ಸವಾಲಾಗಿದೆ.
‘‘ನಾವು ಪ್ರತಿ ದಿನ ಸಹಾಯ ವಾಣಿಯಲ್ಲಿ 150ರಿಂದ 200 ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಹೆಚ್ಚಿನವರು ಔಷಧಕ್ಕಾಗಿ ಕರೆ ಮಾಡುತ್ತಾರೆ. ಔಷಧಕ್ಕಾಗಿ ಯಾವುದೇ ಕೋರಿಕೆ ಬಂದರೆ ಅದನ್ನು ನೆರವೇರಿಸುವುದನ್ನು ದೃಢಪಡಿಸುತ್ತೇವೆ. ಔಷಧವನ್ನು ಅಗತ್ಯವಿರುವವರಿಗೆ ತಲುಪಿಸುತ್ತೇವೆ’’ ಎಂದು ಈ ಮೊದಲು ಅಂಡರ್-19 ಫುಟ್ಬಾಲ್ ತಂಡಕ್ಕೆ ಕೋಚ್ ಆಗಿದ್ದ ಪ್ರಿಯಾ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.
‘‘ನಾವು ಈ ತನಕ ಔಷಧಕ್ಕಾಗಿ ಬಂದಿರುವ ಮನವಿಗಳನ್ನು ತಿರಸ್ಕರಿಸಿಲ್ಲ. ದಿನಸಿ ಹಾಗೂ ಆಹಾರ ವಸ್ತುಗಳಿಗಾಗಿ ಬಂದಿರುವ ಮನವಿಯನ್ನು ಪುರಸ್ಕರಿಸಿದ್ದೇವೆ. ಕೆಲವೊಮ್ಮೆ ವಸ್ತುಗಳನ್ನು ಹಲವು ಜನರಿಗೆ ವಿತರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಇದನ್ನು ವಿಭಜಿಸಿ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ’’ ಎಂದು ಪ್ರಿಯಾ ಹೇಳಿದ್ದಾರೆ.
ಸಹಾಯವಾಣಿ ಕೇಂದ್ರದಲ್ಲಿ ಸುತ್ತ ಮುತ್ತಲಿನ ವಿದ್ಯಾರ್ಥಿಗಳು ಹಾಗೂ ಇತರ ವೃತ್ತಿಪರರ ಮನವಿಯನ್ನು ಸ್ವೀಕರಿಸಲಾಗುತ್ತದೆ. ಕಣ್ಣೂರು ಸಹಾಯವಾಣಿಯ ಕೇಂದ್ರಸ್ಥಾನವಾಗಿದೆ. ಪ್ರಿಯಾ ಹಾಗೂ ವಿನೀತ್ ಹತ್ತಿರದ ಜಿಲ್ಲೆಗಳಿಂದ ಸಾಕಷ್ಟು ಕರೆಗಳನ್ನು ಸ್ವೀಕರಿಸುತ್ತಿದ್ದಾರೆ.
‘‘ನಾವು ಕಣ್ಣೂರಿನ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ವಿವಿಧ ಜಿಲ್ಲೆಗಳಲ್ಲಿ ಕೂಡ ಹೆಲ್ಪ್‌ಲೈನ್‌ಗಳಿವೆ. ಔಷಧಗಳು, ದಿನಸಿಗಳು ಹಾಗೂ ಸರಬರಾಜು ಎಕ್ಸಿಕೂಟಿವ್‌ಗಳ ತನ್ನದೇ ಜಾಲವನ್ನು ಹೊಂದಿವೆ. ಈ ಜಿಲ್ಲೆಗಳ ಪೈಕಿ ಯಾವುದರಿಂದಲೂ ಕರೆ ಬಂದರೆ ಸಂಬಂಧಪಟ್ಟ ಹೆಲ್ ್ಪಲೈನ್ ಸೆಂಟರ್‌ಗೆ ಕರೆಯನ್ನು ವರ್ಗಾಯಿಸುತ್ತೇವೆ’’ ಎಂದರು.
ಸ್ಥಳೀಯ ಫುಟ್ಬಾಲ್ ಕ್ಲಬ್ ಗೋಕುಲಂ ಕೇರಳದ ಮುಖ್ಯ ಕೋಚ್ ಆಗಿದ್ದ ಪ್ರಿಯಾ 2019-20ರ ಐಡಬ್ಲುಎಲ್ ಪ್ರಶಸ್ತಿ ಜಯಿಸಲು ನೆರವಾಗಿದ್ದರು. ಹೆಲ್ಪ್‌ಲೈನ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಕುಟುಂಬ ಸದಸ್ಯರಿಂದ ದೂರ ಉಳಿದಿದ್ದಾರೆ.







