ಕೋವಿಡ್-19 ವಿರುದ್ಧ ಹೋರಾಟ ಎಲ್ಲ ವಿಶ್ವಕಪ್‌ಗಿಂತಲೂ ದೊಡ್ಡದು: ರವಿ ಶಾಸ್ತ್ರಿ

ಹೊಸದಿಲ್ಲಿ, ಎ.15: ದೇಶದ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟ ಎಲ್ಲ ವಿಶ್ವಕಪ್‌ಗಿಂತಲೂ ದೊಡ್ಡದಾಗಿದೆ ಎಂದು ಭಾರತದ ಮುಖ್ಯ ಕ್ರಿಕೆಟ್ ಕೋಚ್ ರವಿ ಶಾಸ್ತ್ರಿ ಬುಧವಾರ ಬಣ್ಣಿಸಿದರು.
ತನ್ನ ಟ್ವಿಟರ್ ಖಾತೆಯಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡ ಶಾಸ್ತ್ರಿ, ಕೊರೋನ ಪಿಡುಗಿನ ವಿರುದ್ಧ ಹೋರಾಡಲು ಜನರು ಕ್ರೀಡೆಗಳಿಂದ ಪಾಠ ಕಲಿಯಬೇಕೆಂದು ಜನರಲ್ಲಿ ವಿನಂತಿಸಿದರು.
‘‘ಇಂದು ಕೋವಿಡ್-19 ವೈರಸ್ ಎಲ್ಲರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೋವಿಡ್-19ನ್ನುನಿಯಂತ್ರಿಸುವುದೆಂದರೆ ವಿಶ್ವಕಪ್‌ನ್ನು ಚೇಸಿಂಗ್ ಮಾಡಿದಂತೆ. ನೀವು ಶತ ಪ್ರಯತ್ನದ ಮುಖಾಂತರ ವಿಶ್ವಕಪ್ ಜಯಿಸಲು ಪ್ರಯತ್ನಿ ಸಬೇಕಾಗುತ್ತದೆ’’ಎಂದು 57ರ ಹರೆಯದ ಶಾಸ್ತ್ರಿ ತಿಳಿಸಿದರು.
‘‘ಕೋವಿಡ್-19 ಸಾಧಾರಣ ವಿಶ್ವಕಪ್ ಅಲ್ಲ. ಇದು ಎಲ್ಲ ವಿಶ್ವಕಪ್‌ಗಿಂತಲೂ ಮಿಗಿಲಾದುದು. ವಿಶ್ವಕಪ್‌ನಲ್ಲಿ ಕೇವಲ 11 ಆಟಗಾರರು ಆಡಿದರೆ, ಕೊರೋನ ವಿರುದ್ಧ 1.4 ಬಿಲಿಯನ್ ಜನರು ಹೋರಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೊರೋನವನ್ನು ಸೋಲಿಸಬೇಕು. ಮಾನವೀಯತೆ ಎಂಬ ವಿಶ್ವಕಪ್‌ನ್ನು ಎತ್ತಿಹಿಡಿಯಬೇಕು’’ ಎಂದರು.
‘‘ನಾವು ಕೇಂದ್ರ, ರಾಜ್ಯ ಸರಕಾರ ಅಥವಾ ಕೊರೋನ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಂದ ಬರುವ ಆದೇಶವನ್ನು ಪಾಲಿಸಬೇಕು. ಮನೆಯಲ್ಲಿ ಇರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಎರಡು ಆದೇಶವನ್ನು ನಾವು ಪಾಲಿಸಬೇಕಾಗಿದೆ.ಇದು ಸುಲಭಸಾಧ್ಯವಿಲ್ಲ. ಆದರೆ, ಪಂದ್ಯವನ್ನು ಗೆಲ್ಲಲು ನಾವು ನೋವನ್ನು ಸಹಿಸಿಕೊಳ್ಳಬೇಕು, ವೈರಸ್‌ನ ಸರಪಳಿಯನ್ನು ತುಂಡರಿಸಬೇಕು’’ ಎಂದು ಶಾಸ್ತ್ರಿ ನುಡಿದರು.







