ಲಾಕ್‌ಡೌನ್ ಕೊರೋನ ವೈರಸ್‌ನ್ನು ಮಣಿಸುವುದಿಲ್ಲ:ರಾಹುಲ್ ಗಾಂಧಿ

ಹೊಸದಿಲ್ಲಿ,ಎ.16: ದೇಶವ್ಯಾಪಿ ಲಾಕ್‌ಡೌನ್ ಮಾರಣಾಂತಿಕ ಕೊರೋನ ವೈರಸ್ ಪ್ರಸರಣವನ್ನು ಕೆಲ ಸಮಯ ವಿಳಂಬಿಸಬಹುದೇ ಹೊರತು ಅದನ್ನು ಹಿಮ್ಮೆಟ್ಟಿಸುವದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಇಲ್ಲಿ ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ವ್ಯೂಹಾತ್ಮಕ ರೀತಿಯಲ್ಲಿ ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದ ಅವರು,ದೇಶವನ್ನು ಹಾಟ್‌ಸ್ಪಾಟ್ ಮತ್ತು ನಾನ್-ಹಾಟ್‌ಸ್ಪಾಟ್ ಎಂಬ ಎರಡು ವಲಯಗಳನ್ನಾಗಿ ಗುರುತಿಸಬೇಕು ಎಂದರು.
ವೀಡಿಯೊ ಆ್ಯಪ್ ಮೂಲಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್,ಪರೀಕ್ಷೆಗಳನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುವುದು ಕೊರೋನ ವೈರಸ್‌ನ್ನು ಮಣಿಸಲು ಏಕೈಕ ಮಾರ್ಗವಾಗಿದೆ. ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮತ್ತೆ ಲಾಕ್‌ಡೌನ್‌ಗೆ ಒಳಗಾಗುವುದು ಅನಿವಾರ್ಯವಾಗಲಿದೆ ಎಂದರು. ಸದ್ಯ ಸರಕಾರವು ವೈರಸ್‌ನ ಹಿಂದೆ ಬಿದ್ದಿದೆ ಮತ್ತು ಇದು ಎಂದಿಗೂ ದೇಶದಲ್ಲಿ ಈ ಸಾಂಕ್ರಾಮಿಕ ಪಿಡುಗಿನ ಸರಿಯಾದ ಚಿತ್ರಣವನ್ನು ನೀಡುವದಿಲ್ಲ ಎಂದ ಅವರು,ಪ್ರಸ್ತುತ ತೀರ ಕಡಿಮೆ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರಾಜ್ಯಗಳ ಹೋರಾಟದಲ್ಲಿ ನೆರವಾಗಲು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು. ತನ್ನ ಸಲಹೆಯನ್ನು ಟೀಕೆ ಎಂದು ಪರಿಗಣಿಸಬೇಕಿಲ್ಲ ಎಂದೂ ಅವರು ನುಡಿದರು.
ಇತರ ಎಲ್ಲ ದೇಶಗಳು ಪರೀಕ್ಷಾ ಕಿಟ್‌ಗಳ ಖರೀದಿಯನ್ನು ಆರಂಭಿಸಿವೆ,ಆದರೆ ನಮ್ಮ ದೇಶದಲ್ಲಿ ಇವು ಕನಿಷ್ಠ ಪ್ರಮಾಣದಲ್ಲಿವೆ. ಇದಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ ಎಂದ ರಾಹುಲ್,ಆದರೆ ಇದು ಸರಕಾರವು ಎಲ್ಲಿ ವಿಫಲಗೊಂಡಿದೆ ಎನ್ನುವುದನ್ನು ಚರ್ಚಿಸುವ ಕಾಲವಲ್ಲ. ನಾವು ಸರಕಾರವು ಪರಿಗಣಿಸಬಹುದಾದ ರಚನಾತ್ಮಕ ಸಲಹೆಗಳನ್ನು ಮಾತ್ರ ನೀಡುತ್ತಿದ್ದೇವೆ ಎಂದರು.
ಬೃಹತ್ ಆರ್ಥಿಕ ಕುಸಿತವೊಂದು ಭಾರತವನ್ನು ಕಾಡಲಿದೆ ಎಂದ ಅವರು,ಸರಕಾರವು ಇದರ ಪರಿಣಾಮಗಳನ್ನು ಕನಿಷ್ಠಗೊಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನಿರುದ್ಯೋಗ ಸಮಸ್ಯೆಯ ಮೊದಲ ಕಂತು ಈಗಾಗಲೇ ಅನಾವರಣಗೊಳ್ಳುತ್ತಿದೆ. ನಾವು ಜೀವಗಳನ್ನು ರಕ್ಷಿಸಬೇಕು ನಿಜ,ಇದೇ ವೇಳೆ ನಮ್ಮ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಗೆಡವಬಾರದು ಎಂದರು. ಸಣ್ಣ ಕೈಗಾರಿಕೆಗಳು,ವಲಸೆ ಕಾರ್ಮಿಕರು ಮತ್ತು ರೈತರಿಗೆ ನೆರವು ಪ್ಯಾಕೇಜ್ ಪ್ರಕಟಿಸುವಂತೆ ಅವರು ಸರಕಾರಕ್ಕೆ ಸೂಚಿಸಿದರು.







