ಉಡುಪಿ: ರಸ್ತೆಯಲ್ಲಿ ನಕಲಿ ನೋಟು ಎಸೆದ ಬಾಲಕನ ಗುರುತು ಪತ್ತೆ!

ಸಾಂದರ್ಭಿಕ ಚಿತ್ರ
ಉಡುಪಿ, ಎ.16: ನಗರದ ವಾದಿರಾಜ ರಸ್ತೆಯ ಶುಭಾಂಗ ಅಪಾರ್ಟ್ ಮೆಂಟ್ ಬಳಿ ಎ.13ರಂದು ಬೆಳಗ್ಗೆ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಹೋಗುವ ಮೂಲಕ ಆತಂಕ ಸೃಷ್ಠಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ನೋಟುಗಳನ್ನು ಎಸೆದಿರುವವರನ್ನು ಸ್ಥಳೀಯ ನಿವಾಸಿ, 14ವರ್ಷ ವಯಸ್ಸಿನ ಎಂಟನೆ ತರಗತಿಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪೊಲೀಸರು ಈ ರಸ್ತೆಯಲ್ಲಿನ ಸಿಸಿಟಿವಿ ಫುಟೇಜ್ಗಳನ್ನು ಪರಿಶೀಲನೆ ನಡೆಸುವ ಮೂಲಕ ಬಾಲಕನನ್ನು ಪತ್ತೆಹಚ್ಚಿದ್ದು, ಈತ ತಾನು ಯಾವುದೇ ದುರುದ್ದೇಶದಿಂದ ಈ ಕೃತ್ಯ ಎಸಗಿಲ್ಲ ಎಂಬ ಹೇಳಿಕೆ ನೀಡಿರುವುದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಮನೆಯಿಂದ ಚಾ ಹುಡಿ ತರಲು ಅಂಗಡಿಗೆ ಬಂದಿದ್ದ ಈ ಬಾಲಕ, ತನ್ನಲ್ಲಿದ್ದ ಮಕ್ಕಳು ಆಡುವ 2000 ಹಾಗೂ 500ರೂ. ಮುಖಬೆಲೆಯ ಸುಮಾರು 25 -30 ನೋಟುಗಳನ್ನು ರಸ್ತೆಯುದ್ದಕ್ಕೂ ಎಸೆಯುತ್ತ ಬಂದಿದ್ದನು. ಆದರೆ ಇದನ್ನು ಗಮನಿಸದ ಸ್ಥಳೀಯರು ಮುಗಿ ಬಿದ್ದು ಹಣವನ್ನು ಹೆಕ್ಕಿದರೆನ್ನಲಾಗಿದೆ. ಬಾಲಕನಿಗೆ ಇದರ ಅರಿವೇ ಇರಲಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆದರೆ ಶ್ರೀರಾಮಸೇನೆ ಮುಖಂಡ ಮಧುಕರ ಮುದ್ರಾಡಿ ಎ.13ರಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿ, ‘ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 25-30 ವರ್ಷದ ಅಪರಿಚಿತ ವ್ಯಕ್ತಿ, ನೋಟುಗಳನ್ನು ಎಸೆದು ಹೋಗಿದ್ದು, ಈ ಯುವಕ ಪ್ರಸ್ತುತ ಕೊರೋನ ಭೀತಿಯಿಂದ ಉಡುಪಿ ನಗರ ಬಂದ್ ಆಗಿರುವುದನ್ನು ನೋಡಿ ನೋಟುಗಳನ್ನು ಬಿಸಾಡಿದರೆ ಹಣದ ಆಸೆಗಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅವುಗಳನ್ನು ಹೆಕ್ಕಲು ಬರುತ್ತಾರೆ ಹಾಗೂ ಇದರಿಂದ ಕೊರೋನ ಖಾಯಿಲೆ ಹರಡಬಹುದು ಎಂಬ ದುರುದ್ದೇಶದಿಂದ ಈ ರೀತಿ ಮಾಡಿರುವ ಸಂಶಯ ಇದೆ’ ಎಂದು ತಿಳಿಸಿದ್ದರು. ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಯ ಬಳಿಕ ಇದು ಕೊರೋನ ವೈರಸ್ ಹರಡಲು ನಡೆಸಿರುವ ಕೃತ್ಯ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಪಪ್ರಚಾರ ನಡೆಸಿ, ವದಂತಿಗಳನ್ನು ಹಬ್ಬಿಸಿ, ಒಂದು ಸಮುದಾಯದ ತಲೆಗೆ ಕಟ್ಟುವ ಪ್ರಯತ್ನ ನಡೆಸಲಾಗಿತ್ತು. ಇದೀಗ ಪೊಲೀಸರು ಈ ಕೃತ್ಯ ಎಸಗಿದ ಬಾಲಕನನ್ನು ಪತ್ತೆ ಹಚ್ಚುವುದರೊಂದಿಗೆ ಕಿಡಿಗೇಡಿಗಳ ಈ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಅದೇ ರೀತಿ ಈ ರೀತಿಯ ಅಪಪ್ರಚಾರಗಳ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ.







